ಬೆಂಗಳೂರು: ಅಂಗನವಾಡಿಗಳಲ್ಲಿ ಎಲ್.ಕೆ.ಜಿ., ಯುಕೆಜಿ ಶಿಕ್ಷಣ ನೀಡಲು ಸರ್ಕಾರ ನಿರ್ಧರಿಸಿದೆ. ಅಂಗನವಾಡಿಗಳನ್ನು ಸರ್ಕಾರಿ ಮಾಂಟೆಸ್ಸರಿ ಎಂದು ಹೊಸದಾಗಿ ನಾಮಕರಣ ಮಾಡಲಿದ್ದು, ಜುಲೈ 22 ರಂದು ಮೊದಲ ಹಂತ ಪ್ರಾರಂಭಿಸಲಾಗುವುದು.
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿಯೇ ಎಲ್.ಕೆ.ಜಿ., ಯುಕೆಜಿ ಶಿಕ್ಷಣ ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಕೇಂದ್ರ ತೆರೆದರೆ ಅಂಗನವಾಡಿಗಳು ಇಲ್ಲವಾಗುತ್ತವೆ. ಅಂಗನವಾಡಿಗಳಲ್ಲಿಯೇ ಎಲ್.ಕೆ.ಜಿ., ಯುಕೆಜಿ ಶಿಕ್ಷಣ ಆರಂಭಿಸಬೇಕು ಎಂದು ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ತೆರೆಯಲು ಒಪ್ಪಿಗೆ ನೀಡಿದ್ದು, ರಾಜ್ಯದ 61,876 ಅಂಗನವಾಡಿಗಳಲ್ಲಿ 1682 ಕಾರ್ಯಕರ್ತೆಯರು ಉನ್ನತ ಶಿಕ್ಷಣ ಪಡೆದ ಕಾರ್ಯಕರ್ತೆಯರಿದ್ದಾರೆ. 6363 ಪದವಿ ಪಡೆದವರು ಕಾರ್ಯಕರ್ತೆಯರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮೊದಲ ಹಂತದಲ್ಲಿ ಈ ಅಂಗನವಾಡಿಗಳಲ್ಲಿ ಎಲ್.ಕೆ.ಜಿ., ಯುಕೆಜಿ ಆರಂಭಿಸಲಾಗುವುದು.
ಜುಲೈ 22ರಂದು ಬೆಂಗಳೂರಿನ 250 ಸರ್ಕಾರಿ ಮಾಂಟೆಸ್ಸರಿಗಳಿಗೆ ಚಾಲನೆ ನೀಡಲಾಗುತ್ತದೆ. ಪಿಯುಸಿ ವಿದ್ಯಾರ್ಹತೆ ಹೊಂದಿದ 15,217 ಅಂಗನವಾಡಿ ಕಾರ್ಯಕರ್ತೆಯರಿದ್ದು, ಎರಡನೇ ಹಂತದಲ್ಲಿ ಸರ್ಕಾರಿ ಮಾಂಟೆಸ್ಸರಿ ಆರಂಭಿಸಲಾಗುತ್ತದೆ. 38,614 ಅಂಗನವಾಡಿಗಳಲ್ಲಿ ಎಸ್ಎಸ್ಎಲ್ಸಿ ಉತ್ತೀರ್ಣರಾದ ಕಾರ್ಯಕರ್ತೆಯರಿದ್ದು, ಈ ಅಂಗನವಾಡಿಗಳಲ್ಲಿ ಮೂರನೇ ಹಂತದಲ್ಲಿ ಸರ್ಕಾರಿ ಮಾಂಟೆಸ್ಸರಿ ಆರಂಭಿಸಲಾಗುವುದು. ಪ್ರತಿ ಸರ್ಕಾರಿ ಮಾಂಟೆಸ್ಸರಿಗೆ 3.5 ಲಕ್ಷ ರೂಪಾಯಿ ಅನುದಾನ ಸಿಗಲಿದೆ. ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುವುದು. ಮಕ್ಕಳಿಗೆ ಸಮವಸ್ತ್ರ, ಶೂ, ಬ್ಯಾಗ್, ಪುಸ್ತಕ ವಿತರಿಸಲಾಗುವುದು ಎನ್ನಲಾಗಿದೆ.