ಬೆಂಗಳೂರು: ಅಂಗನವಾಡಿ ಶಿಕ್ಷಣದ ಅವಧಿಯನ್ನು ಮೂರು ತಾಸು ಕಡಿತಗೊಳಿಸಲಾಗಿದೆ. ಅಂಗನವಾಡಿ ನೌಕರರ ಬೇಡಿಕೆಗೆ ಸರ್ಕಾರ ಅಸ್ತು ಎಂದಿದ್ದು, ಬೆಳಗ್ಗೆ 9.30 ರಿಂದ ಸಂಜೆ 4 ಗಂಟೆಯ ಬದಲಿಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಾಠ ಮಾಡಲು ಸೂಚಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಅಂಗನವಾಡಿ ಶಿಕ್ಷಣದ ಅವಧಿಯನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಿಗದಿ ಮಾಡಲಾಗಿದೆ. ಈ ಹಿಂದೆ 2011 ರಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಬೆಳಗ್ಗೆ 9:30 ರಿಂದ ಸಂಜೆ 4 ಗಂಟೆವರೆಗೆ ಶಿಕ್ಷಣ ನೀಡುವಂತೆ ಆದೇಶಿಸಲಾಗಿತ್ತು.
ಅಂಗನವಾಡಿ ಕಾರ್ಯಕರ್ತೆಯರು ಶಾಲಾ ಪೂರ್ವ ಅವಧಿಯನ್ನು ಕಡಿತ ಮಾಡಬೇಕೆಂದು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವಧಿ ಕಡಿತಗೊಳಿಸಲಾಗಿದೆ. ಶಿಕ್ಷಣದ ಅವಧಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಪೋಷಕರು, ಸಾರ್ವಜನಿಕರು ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದ ರೀತಿಯಲ್ಲಿ ಭೇಟಿಯಾಗಬೇಕು. ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಯ ಪೋಷಕರು, ಪ್ರಧಾನಮಂತ್ರಿ ಮಾತೃ ವಂದನ ಯೋಜನೆಯ ಫಲಾನುಭವಿಗಳು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಅಥವಾ ಚರ್ಚೆ ನಡೆಸಲು ಮಧ್ಯಾಹ್ನ 2 ಗಂಟೆಯ ನಂತರ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಬೇಕು ಎಂದು ಹೇಳಲಾಗಿದೆ.