ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಬಿಸಿಲಿನ ತಾಪಮಾನ ತೀವ್ರ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಂಟು ಜಿಲ್ಲೆಗಳ ಅಂಗನವಾಡಿ ಸಮಯ ಬದಲಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಭಾರಿ ಬಿಸಿಲಿನ ಕಾರಣ ಅಂಗನವಾಡಿ ಮಕ್ಕಳಿಗೆ ತೊಂದರೆಯಾಗಲಿರುವ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿಗೆ ಅನ್ವಯವಾಗುವಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಂಗನವಾಡಿಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಅಂಗನವಾಡಿಗಳು ಕಾರ್ಯನಿರ್ವಹಿಸಲಿವೆ.
ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ಕೊಪ್ಪಳ, ಬೀದರ್, ಬಳ್ಳಾರಿ, ಕಿತ್ತೂರು ಕರ್ನಾಟಕದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿಗಳಿಗೆ ಅನ್ವಯವಾಗುವಂತೆ ಆದೇಶ ಹೊರಡಿಸಲಾಗಿದೆ. ಬದಲಾದ ವೇಳಾಪಟ್ಟಿ ಅನ್ವಯ ಐಸಿಡಿಎಸ್ ಸೇವೆಗಳನ್ನು ನಿಯಮಾನುಸಾರ ಅಂಗನವಾಡಿ ಫಲಾನುಭವಿಗಳಿಗೆ ತಲುಪಿಸಲು ಅಗತ್ಯ ಕ್ರಮವಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ. ಜಿ.ಸಿ. ಪ್ರಕಾಶ್ ತಿಳಿಸಿದ್ದಾರೆ.
ಈ ಮೊದಲು ಬೆಳಗ್ಗೆ 9:30 ರಿಂದ ಸಂಜೆ 4 ಗಂಟೆವರೆಗೆ ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ತಾಪಮಾನ ಇರುವುದರಿಂದ ಮಕ್ಕಳು ಮಧ್ಯಾಹ್ನದ ಸಮಯದಲ್ಲಿ ಪರದಾಡುವಂತಾಗಿತ್ತು. ಹೀಗಾಗಿ ಪೋಷಕರ ಒತ್ತಾಯದ ಮೇರೆಗೆ ಅಂಗನವಾಡಿ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.