
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸೇವೆ ಕಾಯಂಗೊಳಿಸಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ದಾಕು ಹಿತ್ಲು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಫಿಲೊಮಿನಾ ಫೆರ್ನಾಂಡಿಸ್ ಸೇರಿದಂತೆ ಒಟ್ಟು 292 ಅಂಗನವಾಡಿ ಕಾರ್ಯಕರ್ತೆಯರು ಸಲ್ಲಿಸಿದ ಅರ್ಜಿಯ ವಿಚಾರಣೆಯ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕ ಸದಸ್ಯ ಪೀಠದಲ್ಲಿ ನಡೆದಿದೆ. ವಾದ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ಕೇಂದ್ರ ಮತ್ತು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ್ದು, ವಿಚಾರಣೆ ಮುಂದೂಡಲಾಗಿದೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಶಂಕರ ಎಸ್. ಭಟ್, ರಾಜ್ಯ ಮತ್ತು ಕೇಂದ್ರ ಸರ್ಕಾರದ ನೌಕರರ ರೀತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರನ್ನು, ಪರಿಗಣಿಸಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಗ್ರೂಪ್ ಸಿ ದರ್ಜೆಗೆ, ಸಹಾಯಕಿಯರನ್ನು ಗ್ರೂಪ್ ಡಿ ದರ್ಜೆಗೆ ಅನ್ವಯಿಸಿ ಅವರ ಸೇವೆ ಕಾಯಂಗೊಳಿಸಬೇಕು. ಅವರಿಗೆ ಕಾನೂನು ಬದ್ಧವಾಗಿ ಸಲ್ಲಬೇಕಾದ ವೇತನ ಭತ್ಯೆ ಸೇರಿದಂತೆ ಇತರ ಹಿಂಬಾಕಿ ನೀಡಬೇಕು. ಈ ನಿಟ್ಟಿನಲ್ಲಿ ಗುಜರಾತ್ ಹೈಕೋರ್ಟ್ ತೀರ್ಪನ್ನು ರಾಜ್ಯದಲ್ಲಿಯೂ ಅನುಸರಿಸಲು ನಿರ್ದೇಶಸಬೇಕೆಂದು ಮನವಿ ಮಾಡಿದ್ದಾರೆ.