ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗೆ ಮಾಸಿಕ ವೇತನ ಕೈ ಸೇರದೆ ಕಚೇರಿಗಳಿಗೆ ಅಲೆದಾಡುತ್ತಿರುವ ಸಂಗತಿ ಬಳಕೆಗೆ ಬಂದಿದೆ.
ವೇತನದ ಜೊತೆ ಪ್ರೋತ್ಸಾಹ ಧನ ಕೂಡ ವಿಳಂಬವಾಗಿದ್ದು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ತಾಲೂಕು ಸಿಬ್ಬಂದಿಗೆ ಮೂರು ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಇದರಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಅಧಿಕಾರಿಗಳು ಮತ್ತು ಸಚಿವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರದ ಹಣ ಬಿಡುಗಡೆಗೆ ಅನುಗುಣವಾಗಿ ರಾಜ್ಯದ ಮೊತ್ತವನ್ನು ಸೇರಿಸಿ ನೀಡಲಾಗುತ್ತಿದ್ದು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಎರಡು ತಿಂಗಳಿಂದ ಗೌರವ ಧನ ನೀಡಿಲ್ಲವೆನ್ನಲಾಗಿದೆ.
ಇನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗೂ ಮೂರು ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ವೇತನ ವಿಳಂಬದಿಂದಾಗಿ ತೊಂದರೆ ಎದುರಾಗಿದೆ. ಕೊಪ್ಪಳ, ಬಳ್ಳಾರಿ, ರಾಯಚೂರು, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಕೊಡಗು, ಹಾಸನ ಜಿಲ್ಲೆಗಳಲ್ಲಿ ವೇತನ ವಿಳಂಬವಾಗಿದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ಮೂರ್ನಾಲ್ಕು ತಿಂಗಳಿಗೊಮ್ಮೆ ಅನುದಾನ ನೀಡುತ್ತದೆ. ಈಗ ಎರಡು ತಿಂಗಳ ಅನುದಾನ ಬಾಕಿ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಅಂಗನವಾಡಿ ವೆಚ್ಚ ಭರಿಸಬೇಕಿದೆ. ಕೇಂದ್ರ ಸರ್ಕಾರ ಸಕಾಲಕ್ಕೆ ಅನುದಾನ ಬಿಡುಗಡೆ ಮಾಡದ ಕಾರಣ ವೇತನ ವಿಳಂಬವಾಗಿದೆ.
ಆಶಾ ಕಾರ್ಯಕರ್ತೆಯರು ಮಾಸಿಕ ಪ್ರೋತ್ಸಾಹ ಧನಕ್ಕೆ ಕಾಯುವಂತಾಗಿದೆ. ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ ವರ್ಷದ ಪ್ರಾರಂಭಿಕ ಒಂದೆರಡು ತಿಂಗಳು ಪ್ರೋತ್ಸಾಹ ಜಮೆ ಆಗಲಿದ್ದು, ನಂತರ ಮೂರ್ನಾಲ್ಕು ತಿಂಗಳಿಗೊಮ್ಮೆ ವೇತನ ಪಾವತಿಸಲಾಗುತ್ತದೆ. ಹೊರಗುತ್ತಿಗೆ, ತಾತ್ಕಾಲಿಕ ನೌಕರರಿಗೆ ಟಿಎ, ಡಿಎ ನೀಡಿಲ್ಲ. ಇನ್ನು ಪ್ರಭಾರ ಭತ್ಯೆ, ಪ್ರಯಾಣ ಭತ್ಯೆ ವರ್ಷಗಳಿಂದ ಬಾಕಿ ಇದ್ದು, ಮೂರು ತಿಂಗಳಿಗೊಮ್ಮೆ ವೇತನ ಪಡೆಯುವ ಅಧಿಕಾರಿಗಳು, ಸಿಬ್ಬಂದಿಗೆ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.