ಬೆಂಗಳೂರು: ರಾಜ್ಯದಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ಇವುಗಳಿಗೆ ಕಳೆದ 8 ತಿಂಗಳಿಂದ ಬಾಡಿಗೆ ಪಾವತಿಸಿಲ್ಲ. ಇದರಿಂದಾಗಿ ಅಂಗನವಾಡಿ ಕೇಂದ್ರಗಳು ಸಂಕಷ್ಟ ಎದುರಿಸುವಂತಾಗಿದೆ.
ಬಾಡಿಗೆ ಪಾವತಿಸದ ಕಾರಣ ಕಟ್ಟಡ ಮಾಲೀಕರು ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಒತ್ತಡ ಎದುರಿಸುವಂತಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿ ರಾಜ್ಯದಲ್ಲಿ 69,899 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 12,393 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ.
ನಗರ ಪ್ರದೇಶದ ಅಂಗನವಾಡಿ ಕೇಂದ್ರಕ್ಕೆ 4,000 ರೂ., ಗ್ರಾಮೀಣ ಪ್ರದೇಶದ ಅಂಗನವಾಡಿ ಕೇಂದ್ರಕ್ಕೆ ಒಂದು ಸಾವಿರ ರೂಪಾಯಿ ಬಾಡಿಗೆ ಪಾವತಿಸಲಾಗುತ್ತಿದೆ. ಸರ್ಕಾರದಿಂದ ಅಂಗನವಾಡಿ ಕೇಂದ್ರಗಳ ಬಾಡಿಗೆಯಾಗಿ ಸುಮಾರು 3.43 ಕೋಟಿ ರೂ. ಬಾಡಿಗೆ ಪಾವತಿಸಬೇಕಿದೆ.
ಅಂಗನವಾಡಿ ಕೇಂದ್ರಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಶೇಕಡ 60: 40 ಅನುಪಾತದಲ್ಲಿ ಅನುದಾನ ಬಿಡುಗಡೆಯಾಗುತ್ತಿದ್ದು, ಕಳೆದ ಮಾರ್ಚ್ ನಂತರ ಬಾಡಿಗೆ ಹಣ ಬಿಡುಗಡೆಯಾಗಿಲ್ಲ. ಬಾಡಿಗೆ ನೀಡದ ಕಾರಣಕ್ಕೆ ಕಟ್ಟಡಗಳ ಮಾಲೀಕರು ಅಂಗನವಾಡಿ ಕೇಂದ್ರಗಳನ್ನು ಖಾಲಿ ಮಾಡಲು ಒತ್ತಡ ಹೇರುತ್ತಿದ್ದಾರೆ.
ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಕಾರಣ ಅನುದಾನ ಬಂದ ನಂತರ ಬಾಡಿಗೆ ನೀಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಒತ್ತಡ ಎದುರಾಗಿದೆ. ಇನ್ನು ಸರ್ಕಾರ 4 ತಿಂಗಳಿಂದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವಧನ ನೀಡಿಲ್ಲವೆಂದು ಹೇಳಲಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯಕ್ರಮ ಕೈಗೊಳ್ಳಬೇಕಿದೆ.