
ಬೆಂಗಳೂರು: ಅಂಗನವಾಡಿ ಉಳಿಸಿ ಬಲಪಡಿಸಿ ಎಂಬ ಘೋಷಣೆಯೊಂದಿಗೆ ಐದು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಪ್ಟೆಂಬರ್ 19 ರಂದು ಅಂಗನವಾಡಿ ಕಾರ್ಯಕರ್ತೆಯರು ವಿಧಾನಸೌಧ ಚಲೋ ಹಮ್ಮಿಕೊಂಡಿದ್ದಾರೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಿಂದ ವಿಧಾನಸಭಾ ಚಲೋ ಆರಂಭವಾಗಲಿದೆ. ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಪೂರೈಸುತ್ತಿರುವ ಪೌಷ್ಟಿಕ ಆಹಾರ ಪದಾರ್ಥಗಳು ಕಳಪೆಯಾಗಿದ್ದು, ಗುಣಮಟ್ಟ ಆಹಾರ ಪದಾರ್ಥ ಸರಬರಾಜು ಮಾಡಬೇಕು. 1975 ರಿಂದ ಸೇವೆ ಸಲ್ಲಿಸಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಯಿಟಿ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ., ಸಹಾಯಕಿಯರಿಗೆ 10 ಸಾವಿರ ರೂ. ವೇತನ ನೀಡಬೇಕು. ಆಯ್ಕೆಯ ವಯೋಮಿತಿಯನ್ನು ಸಾಮಾನ್ಯ ವರ್ಗದವರಿಗೆ 38 ವರ್ಷ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಹೋರಾಟ ಕೈಗೊಳ್ಳಲಾಗಿದೆ.