ಬೆಂಗಳೂರು: ಖಾಸಗಿ ಪ್ಲೇ ಹೋಂಗಳ ರೀತಿಯಲ್ಲಿಯೇ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಆಟಿಕೆಯೊಂದಿಗೆ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಶಿಕ್ಷಣ ಇಲಾಖೆಯು ಆಟಿಕೆ ಆಧಾರಿತ ಶಿಕ್ಷಣ ಶಾಸ್ತ್ರ ಎನ್ನುವ ಪರಿಕಲ್ಪನೆ ರೂಪಿಸಿದೆ. ರಾಜ್ಯದಲ್ಲಿ 1008 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಶಿಕ್ಷಣ ಇಲಾಖೆ ಆರಂಭಿಸಿದ್ದು, ಖಾಸಗಿ ಪ್ಲೇ ಹೋಂಗಳ ರೀತಿಯಲ್ಲಿ ಮಕ್ಕಳಿಗೆ ಪಾಠಗಳನ್ನು ಅರ್ಥೈಸಲು ಆಟಿಕೆ ಪರಿಣಾಮಕಾರಿ ವಿಧಾನವಾಗಿದೆ.
ಶಿಕ್ಷಕರಿಗೆ ಆಟಿಕೆ ತಯಾರಿ ತರಬೇತಿ ನೀಡಲಾಗಿದೆ. ಶಿಕ್ಷಕರು ತಮ್ಮ ಪಾಠಕ್ಕೆ ಅನುಗುಣವಾಗಿ ಆಟಿಕೆಗಳನ್ನು ರೂಪಿಸಿಕೊಂಡು ಅವುಗಳ ಮೂಲಕ ಮಕ್ಕಳಿಗೆ ಬೋಧನೆ ಮಾಡಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ ಈ ಆಟಿಕೆ ಆಧಾರಿತ ಶಿಕ್ಷಣ ಶಾಸ್ತ್ರ ಎನ್ನುವ ಬೋಧನಾ ಕಲಿಕೆ ಪರಿಕಲ್ಪನೆ ರೂಪಿಸಿದೆ. ಇಂತಹ ಬೋಧನೆಯಿಂದ ಮಕ್ಕಳಲ್ಲಿ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ, ಸಮಸ್ಯೆಗೆ ಪರಿಹಾರ, ಸಂವಹನ ವೃದ್ಧಿ, ಹೊಂದಾಣಿಕೆಗೆ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.