ಬೆಂಗಳೂರು: ದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ರಾಜ್ಯದ ಅಂಗನವಾಡಿ ಕೇಂದ್ರಗಳ ಉನ್ನತೀಕರಣ ಮಾಡಲಾಗುತ್ತಿದ್ದು, ಅಂಗನವಾಡಿ ಕೇಂದ್ರಗಳಲ್ಲೇ ಎಲ್ ಕೆಜಿ, ಯುಕೆಜಿ ಆರಂಭಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜುಲೈ 22 ರಂದು ರಾಜ್ಯದ 250 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ, ಯು.ಕೆ.ಜಿ) ತರಗತಿಗಳನ್ನು ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಜಾರಿಯಾಗಲಿ, ಐಸಿಡಿಎಸ್ ಉಳಿಸಿ ಮಕ್ಕಳನ್ನು ರಕ್ಷಿಸಿ, ಸಂಘಟನೆ-ಸಂಘರ್ಷ-ಶಿಕ್ಷಣ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಂಗನವಾಡಿ ಕೇಂದ್ರಗಳಲ್ಲೇ ಜುಲೈ 22ರಂದು ಎಲ್ ಕೆಜಿ, ಯುಕೆಜಿ ಆರಂಭವಾಗಲಿದೆ ಎಂದು ಘೋಷಿಸಿದರು. ಮಕ್ಕಳಿಗೆ ಇಲಾಖೆ ವತಿಯಿಂದಲೇ ಬ್ಯಾಗ್, ಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಮೊದಲ ಹಂತದಲ್ಲಿ 15 ರಿಂದ 20 ಸಾವಿರ ಶಾಲೆಗಳಲ್ಲಿ ಗವರ್ನಮೆಂಟ್ ಮಾಂಟೆಸ್ಸರಿ ಆರಂಭಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣ ಮಾಡುವುದೇ ಇಲಾಖೆಯ ಉದ್ದೇಶ. ಈಗಾಗಲೇ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಗುಣಮಟ್ಟದ ಆಹಾರ, ಶಿಕ್ಷಕಿಯರಿಗೆ ಸೀರೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಅಂಗನವಾಡಿ ಶಿಕ್ಷಕಿಯರನ್ನು ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ಪ್ರತಿಯೊಬ್ಬ ಪೋಶಕರ ಕನಸು. ಆದರೆ, ಅಂಗನವಾಡಿಗೆ ಪೆಟ್ಟು ಬೀಳಬಾರದು. ಹಾಗಾಗಿ ನಾವೇ ಅಂಗನವಾಡಿ ಕೇಂದ್ರಗಳ ಉನ್ನತೀಕರಣಕ್ಕೆ ಮುಂದಾಗಿದ್ದು, ಪೂರ್ವ ಪ್ರಾಥಮಿಕದಲ್ಲೇ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.