ಬೆಂಗಳೂರು: ಇನ್ಮುಂದೆ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ ಕೆಜಿ, ಯುಕೆಜಿ ಗುಣಮಟ್ಟದ ಶಿಕ್ಷಣ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ಎಲ್ಲಾ ಅಂಗನವಾಡಿಗಳನ್ನು ಉನ್ನತೀಕರಿಸಲು ನಿರ್ಧರಿಸಿದೆ.
ಅಂಗನವಾಡಿ ಕೇಂದ್ರಗಳಲ್ಲಿಯೇ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಸಿಎಂ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ರಚಿಸಲು ಸೂಚಿಸಿದ್ದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗ ಹೊರತುಪಡಿಸಿ, ಉಳಿದೆಡೆಗಳಲ್ಲಿ ಹೊಸದಾಗಿ ಅಂಗನವಾಡಿ ಕೇಂದ್ರಗಳಲ್ಲೆ ಎಲ್ ಕೆಜಿ, ಯುಕೆಜಿ ಆರಂಭವಾಗಲಿದೆ. ಗುಣಮಟ್ಟದ ಶಿಕ್ಷಣ ಹಾಗೂ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲಾಗುವುದು. ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಮಕ್ಕಳಿಗೆ ಇಲಾಖೆ ಮೂಲಕವೇ ಸಮವಸ್ತ್ರ, ಪುಸ್ತಕ, ಬ್ಯಾಗ್ ಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಶಾಲೆಗಳ ಮಾದರಿಯಲ್ಲೆ ವರ್ಗಾವಣೆ ಪತ್ರ (ಟಿಸಿ) ನೀಡಲು ಕ್ರಮವಹಿಸಲಾಗುವುದು. ಸರ್ಕಾರಿ ಶಾಲೆಗಳಲ್ಲೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಕಾಳಜಿಯಿಂದ ಶಿಕ್ಷಣ ಇಲಾಖೆ ಕೂಡ ಸರ್ಕಾರಿ ಮಾಂಟೆಸರಿ ಆರಂಭಿಸಲು ಮುಂದಾಗಿದೆ. ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಚರ್ಚಿಸಲಾಗಿದ್ದು, ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಶಿಕ್ಷಕಿಯರ ಪೈಕಿ 9000 ಮಂದಿ ಪದವಿ ಪಡೆದವರಾಗಿದ್ದಾರೆ ಹಾಗೂ ಒಂದೂವರೆ ಸಾವಿರಕ್ಕಿಂತಲೂ ಹೆಚ್ಚು ಮಂದಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹೀಗಾಗಿ, ಗುಣಮಟ್ಟದ ಶಿಕ್ಷಣ ನೀಡಿಕೆಗೆ ಯಾವುದೇ ಸಮಸ್ಯೆ ಆಗದು. ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವ ಚಿಂತನೆ ಇದೆ ಎಂದು ಹೇಳಿದ್ದಾರೆ.