ಬೆಂಗಳೂರು: ರಾಜ್ಯದ ಹಲವೆಡೆ ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಕಳಪೆ ಮೊಟ್ಟೆ ಅಕ್ರಮ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ,
ವಿಭಾಗವಾರು ಬದಲಿಗೆ ಕೇಂದ್ರೀಕೃತ ಟೆಂಡರ್ ವ್ಯವಸ್ಥೆಯಡಿ ಮೊಟ್ಟೆ ಖರೀದಿಸಿ ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ 2023 -24ನೇ ಸಾಲಿನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಮತ್ತು ಮಾತೃಪೂರ್ಣ ಯೋಜನೆಯಡಿ ರಾಜ್ಯದ ಅಂಗನವಾಡಿಗಳಲ್ಲಿ ಆರು ತಿಂಗಳಿಂದ ಆರು ವರ್ಷದ ಮಕ್ಕಳು ಹಾಗೂ ಗರ್ಭಿಣಿಯರು, ಬಾಣಂತಿಯರಿಗೆ ಮೊಟ್ಟೆ ಪೂರೈಕೆಗೆ ಕೇಂದ್ರೀಕೃತ ಟೆಂಡರ್ ಪ್ರಕ್ರಿಯೆ ಮೂಲಕ ಪ್ರತಿ ಮೊಟ್ಟೆಗೆ ಆರು ರೂಪಾಯಿಗೆ ಕಡಿಮೆಯಾಗದಂತೆ ಒಟ್ಟು 297.19 ಕೋಟಿ ರೂಪಾಯಿ ವೆಚ್ಚ ಮಾಡಲು ಸಭೆ ಒಪ್ಪಿಗೆ ಸೂಚಿಸಿದೆ.
ಸಭೆಯ ಬಳಿಕ ಮಾಹಿತಿ ನೀಡಿದ ಸಚಿವ ಹೆಚ್.ಕೆ. ಪಾಟೀಲ್ ಕೇಂದ್ರೀಕೃತ ಟೆಂಡರ್ ವ್ಯವಸ್ಥೆಯಡಿ ಮೊಟ್ಟೆ ಖರೀದಿಸಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.