ಬೆಳಗಾವಿ: ಅಂಗನವಾಡಿ ಕೇಂದ್ರಗಳಿಗೆ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕಾರ್ಯಕರ್ತೆಯೊಬ್ಬರು ಮಾಂಗಲ್ಯ ಸರ ಒತ್ತೆ ಇಟ್ಟು ಬಾಡಿಗೆ ಕಟ್ಟಿದ್ದಾರೆ. ಮತ್ತೊಬ್ಬ ಕಾರ್ಯಕರ್ತ ಕಳೆದ 20 ತಿಂಗಳಿನಿಂದ ಸಾಲ ಮಾಡಿ ಅಂಗನವಾಡಿ ಕೇಂದ್ರದ ಬಾಡಿಗೆ ಪಾವತಿಸುತ್ತಿದ್ದಾರೆ.
ಬೆಳಗಾವಿಯ ಮೆಣಸಿನಗಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಾಂಗಲ್ಯ ಸರ ಅಡವಿಟ್ಟು ಬಾಡಿಗೆ ಪಾವತಿಸಿದ್ದು, ಅಧಿಕಾರಿಗಳು ಹಣ ಪಾವತಿಸಿ ಅದನ್ನು ಬಿಡಿಸಿ ಕೊಟ್ಟಿದ್ದಾರೆ. ದರಬಾರ್ ಗಲ್ಲಿಯ ಅಂಗನವಾಡಿಗೆ 20 ತಿಂಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆ ಸಾಲ ಮಾಡಿ ಬಾಡಿಗೆ ಪಾವತಿಸುತ್ತಿದ್ದಾರೆ ಎಂದು ಬೆಳಗಾವಿಯ ಅಂಗನವಾಡಿ ಕಾರ್ಯಕರ್ತೆಯರು ದೂರಿದ್ದಾರೆ.
ರಾಜ್ಯದಲ್ಲಿ 66,361 ಅಂಗನವಾಡಿ ಕೇಂದ್ರಗಳಿದ್ದು, 19,802 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಗ್ರಾಮ ಪಂಚಾಯಿತಿ ಇಲ್ಲವೇ ಖಾಸಗಿ ಕಟ್ಟಡಗಳ ಬಾಡಿಗೆ ಪಡೆದು ಅಂಗನವಾಡಿ ಕೇಂದ್ರ ತೆರೆಯಲಾಗಿದೆ. ನಗರ ಕೇಂದ್ರಗಳ ಅಂಗನವಾಡಿಗಳಿಗೆ ತಿಂಗಳಿಗೆ 4000 ರೂ., ಗ್ರಾಮೀಣ ಪ್ರದೇಶದ ಅಂಗನವಾಡಿಗೆ ಒಂದು ಸಾವಿರ ಬಾಡಿಗೆ ಹಣ ನೀಡುತ್ತಿದ್ದು, ಈ ಮೊತ್ತ ಭರಿಸಲಾಗದೇ ಅಸಹಾಯಕ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 7 ತಿಂಗಳಿಂದ ಅನುದಾನ ಬಿಡುಗಡೆಯಾಗದ ಕಾರಣ ವಿದ್ಯುತ್, ಇಂಟರ್ನೆಟ್ ಬಿಲ್, ವಾಹನಗಳಿಗೆ ಇಂಧನ ತುಂಬಿಸಲು, ಅಂಗನವಾಡಿ ಕೇಂದ್ರಗಳ ಬಾಡಿಗೆ ಪಾವತಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.