ಬಾಲಿವುಡ್ ನಟ ಅಂಗದ್ ಬೇಡಿ ಕುರಿತು ನಿಮಗೆ ತಿಳಿದಿರಬಹುದು. ಮಾಡೆಲ್ ವೃತ್ತಿಯಲ್ಲಿದ್ದ ಅಂಗದ್, ಬಳಿಕ 2004 ರಲ್ಲಿ ‘ಕಾಯ ತರನ್’ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ ಫಾಲ್ತೂ, ಪಿಂಕ್, ಡಿಯರ್ ಜಿಂದಗಿ, ಗುಂಜನ್ ಸಕ್ಸೇನಾ ಮತ್ತು ಟೈಗರ್ ಜಿಂದಾ ಹೈ ಮೊದಲಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದು, ಇಷ್ಟಾದರೂ ಕೂಡ ಬಾಲಿವುಡ್ ನಲ್ಲಿ ಅವರು ಆರಕ್ಕೆ ಏರದ ಮೂರಕ್ಕೆ ಇಳಿಯದ ನಟ ಎಂಬಂತಾಗಿದ್ದಾರೆ.
ಆದರೆ ಬಹಳಷ್ಟು ಜನಕ್ಕೆ ಗೊತ್ತಿಲ್ಲದ ಸಂಗತಿ ಎಂದರೆ ಅಂಗದ್ ಬೇಡಿ, ಖ್ಯಾತ ಕ್ರಿಕೆಟಿಗ ದಿವಂಗತ ಬಿಷನ್ ಸಿಂಗ್ ಬೇಡಿ ಅವರ ಪುತ್ರ. 1966 ರಿಂದ 1979ರ ವರೆಗೆ ಭಾರತ ತಂಡದ ಪರ ಟೆಸ್ಟ್ ಕ್ರಿಕೆಟ್ ಆಡಿದ್ದ ಬಿಷನ್ ಸಿಂಗ್ ಬೇಡಿ, ಭಾರತ ತಂಡಕ್ಕೆ ತಾವು ನೀಡಿದ ಕೊಡುಗೆ ಕಾರಣಕ್ಕೆ ಈಗಲೂ ಚಿರಸ್ಮರಣೀಯರಾಗಿದ್ದಾರೆ. ಇತ್ತೀಚೆಗೆ ಅಂಗದ್ ಬೇಡಿ ಟಿವಿ ಶೋ ಒಂದರಲ್ಲಿ ಹೇಳಿದ ಮಾತು ಈಗ ಬಿಷನ್ ಸಿಂಗ್ ಬೇಡಿ ಅವರನ್ನು ಮತ್ತೆ ನೆನೆಯುವಂತೆ ಮಾಡಿದೆ.
ಅಂಗದ್ ಬೇಡಿ, ಸೈರಸ್ ಬರೋಚ ನಡೆಸಿಕೊಡುವ ಟಾಕ್ ಶೋನಲ್ಲಿ ಪಾಲ್ಗೊಂಡಿದ್ದು, ಈ ವೇಳೆ ತಮ್ಮ ತಂದೆ ಬಿಷನ್ ಸಿಂಗ್ ಬೇಡಿ 15 ವರ್ಷಗಳ ಕಾಲ ತಮ್ಮೊಂದಿಗೆ ಮಾತು ಬಿಟ್ಟ ಸಂಗತಿಯನ್ನು ಸ್ಮರಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕೆಂಬ ಇಚ್ಛೆ ಹೊಂದಿದ್ದ ಅಂಗದ್ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದು, ಇದು ಬಿಷನ್ ಸಿಂಗ್ ಬೇಡಿ ಅವರಿಗೆ ಇಷ್ಟವಿರಲಿಲ್ಲವಂತೆ. ಸಿಖ್ ಧರ್ಮಕ್ಕೆ ಸೇರಿದ ಬಿಷನ್ ಸಿಂಗ್ ಬೇಡಿ, ತಮ್ಮ ಸಂಪ್ರದಾಯದಂತೆ ಪುತ್ರ ಕೂಡ ಕೂದಲನ್ನು ಬಿಡಬೇಕೆಂದು ಬಯಸಿದ್ದರಂತೆ. ಆದರೆ ಇದಕ್ಕೆ ಮಗ ಸಮ್ಮತಿಸದೇ ಇದ್ದಾಗ ಬರೋಬ್ಬರಿ 15 ವರ್ಷಗಳ ಕಾಲ ಮಾತು ಬಿಟ್ಟಿದ್ದಾರಂತೆ.