
ಬೆಂಗಳೂರು: ಆನೇಕಲ್ ನ ಅತ್ತಿಬೆಲೆ ಪಟಾಕಿ ಅಂಗಡಿಯಲ್ಲಿ ಅಗ್ನಿ ದುರಂತ ಸಂಭವಿಸಿ 14 ಜನರು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪಟಾಕಿ ಅನ್ ಲೋಡ್ ಮಾಡುವಾಗ ಪಟಾಕಿ ಅಂಗಡಿಯಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 14 ಜನರು ಸಜೀವ ದಹನಗೊಂಡಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಅಂಗಡಿ ಮಾಲೀಕ ಪಟಾಕಿ ಸಂಗ್ರಹಕ್ಕೆ ಯಾವುದೇ ಲೈಸನ್ಸ್ ಪಡೆದಿರಲಿಲ್ಲ. ಪಟಾಕಿ ರವಾನಿಸುವ ಪ್ರೊಸೆಸಿಂಗ್ ಯುನಿಟ್ ಗೆ ಮಾತ್ರ ಪರವಾನಿಗಿ ಇತ್ತು ಎಂಬ ಸಂಗತಿ ತಿಳಿದುಬಂದಿದೆ.
2028ರ ವರೆಗೆ ಪ್ರೊಸೆಸಿಂಗ್ ಯೂನಿಟ್ ಗೆ ಪರವಾನಿಗಿ ಪಡೆಯಲಾಗಿತ್ತು. ಆದರೆ ಮಾಲೀಕ ಪಟಾಕಿ ಗೋಡೌನ್ ಗೆ ಅನುಮತಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹಿಸಿಟ್ಟಿದ್ದ,ಮಾಲೀಕನ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.