ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ ಚೀಟಿ ಹೆಸರಲ್ಲಿ ಐದು ಕೋಟಿ ರೂಪಾಯಿ ವಂಚಿಸಿ ವ್ಯಕ್ತಿ ಪರಾರಿಯಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ರಾಜಸ್ಥಾನ ಮೂಲದ ಮುನಾರಾಮ್ ಎಂಬಾತ ಎಸ್ಕೇಪ್ ಆಗಿರುವ ಆರೋಪಿ. ಈತ ಆನಂದ್ ಜ್ಯುವೆಲ್ಲರ್ಸ್ ಆಂಡ್ ಕೇಸರ್ ಬ್ಯಾಂಕರ್ಸ್ ನ ಮಾಲೀಕ. ಜನರಿಂದ ಹಣ ಕಟ್ಟಿಸಿಕೊಂಡು ನಾಪತ್ತೆಯಾಗಿದ್ದಾನೆ. ಹಬ್ಬದಲ್ಲಿ ಚಿನ್ನ ಕೊಡುತ್ತೇನೆ ಎಂದು ಹೇಳಿ ಮಹಿಳೆಯರಿಂದ ಹಣ ಕಟ್ಟಿಸಿಕೊಂಡಿದ್ದಾನೆ. ಮಹಿಳೆಯರು ಸಾಲ ಮಾಡಿ ಹಣ ನೀಡಿದ್ದಾರೆ. ವರಮಹಾಲಕ್ಷ್ಮೀ ಹಬ್ಬ ಸಮೀಪಿಸುತ್ತಿರುವುದರಿಂದ ಹಣ ಕಟ್ಟಿದ ಮಹಿಳೆಯರು ಅಂಗಡಿ ಬಳಿ ಬಂದು ನೋಡಿದರೆ ಮಾಲೀಕ ಬೀಗ ಹಾಕಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಹಲವು ವರ್ಷಗಳಿಂದ ಮುನಾರಾಮ್ ಆನೇಕಲ್ ನಲ್ಲಿ ವಾಸವಾಗಿದ್ದ. 150ಕ್ಕೂ ಹೆಚ್ಚು ಮಹಿಳೆಯರು ಚೀಟಿ ಹಣಕ್ಕಾಗಿ ಒಡವೆ ಹಾಗೂ ಹಣವನ್ನು ಆತನ ಬಳಿ ಇಟ್ಟಿದ್ದರು. ಈಗ ಇದ್ದಕ್ಕಿದ್ದಂತೆ ಮುನಾರಾಮ್ ಹಣ ಹಾಗೂ ಒಡವೆಗಳೊಂದಿಗೆ ಪರಾರಿಯಾಗಿದ್ದಾನೆ. ಚಿನ್ನದ ಅಂಗಡಿ ಮಾಲೀಕ ಅಂಗಡಿ ಹಾಗೂ ಮನೆ ಖಾಲಿ ಮಾಡಿ ನಾಪತ್ತೆಯಾಗಿದ್ದು, ಹಣ ಕಳೆದುಕೊಂಡವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.