ಹೆಂಡತಿಯನ್ನು ಕೊಲೆ ಮಾಡಿ ದೊಡ್ಡ ಸೂಟ್ ಕೇಸ್ ನಲ್ಲಿ ತುಂಬಿ ಶವವನ್ನು ಕೆರೆಗೆ ಎಸೆದು, ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ಸಾಫ್ಟ್ ವೇರ್ ಎಂಜಿನಿಯರ್ ನನ್ನು ತಿರುಪತಿ ಪೊಲೀಸರು ಬಂಧಿಸಿದ್ದಾರೆ.
2022 ರ ಜನವರಿಯಲ್ಲಿ ಈ ಕೊಲೆ ನಡೆದಿದ್ದು, ಐದು ತಿಂಗಳ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಕೊರ್ಲಗುಂಟಾದ ಪದ್ಮ ಎಂಬುವರು 2019 ರಲ್ಲಿ ವೇಣುಗೋಪಾಲ್ ಎಂಬುವರನ್ನು ವಿವಾಹವಾಗಿದ್ದರು. ಮದುವೆಯಾದ ನಂತರ ಪತಿ ಪದ್ಮ ಅವರಿಗೆ ಕಿರುಕುಳ ನೀಡುತ್ತಿದ್ದರು. ಇದು ಅತಿಯಾದ ಹಿನ್ನೆಲೆಯಲ್ಲಿ ಪದ್ಮ ಪೊಲೀಸರಿಗೆ ದೂರು ನೀಡಿದ್ದರು. ಆರಂಭದಲ್ಲಿ ಇಬ್ಬರ ನಡುವಿನ ವೈಮಸ್ಯವನ್ನು ಪರಿಹರಿಸಲು ಎರಡೂ ಕುಟುಂಬಗಳ ಹಿರಿಯರು ಪ್ರಯತ್ನಿಸಿದ್ದರು. ಆದರೆ, ಇದು ಫಲಕಾರಿಯಾಗದ ಹಿನ್ನೆಲೆಯಲ್ಲಿ ಅಂತಿಮವಾಗಿ ವೇಣುಗೋಪಾಲ್ ತನ್ನ ಪತ್ನಿಗೆ ವಿಚ್ಛೇದನ ನೊಟೀಸ್ ಅನ್ನು ಜಾರಿ ಮಾಡಿದ್ದರು.
ಹೈದ್ರಾಬಾದ್ ನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವೇಣುಗೋಪಾಲ್ ತನ್ನ ಸ್ನೇಹಿತ ಸಂತೋಷ್ ಜೊತೆ ಸೇರಿ ಜನವರಿ 5 ರಂದು ಪದ್ಮಾಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಶವನ್ನು ಸೂಟ್ ಕೇಸ್ ನಲ್ಲಿ ತುಂಬಿ ವೆಂಕಟಾಪುರಂನ ಕೆರೆಗೆ ಎಸೆದಿದ್ದರು. ನಂತರ ಪತ್ನಿ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದ.
ಪೊಲೀಸರು ತನಿಖೆ ನಡೆಸಿದರೂ ಯಾವುದೇ ಸುಳಿವು ಲಭಿಸಲಿಲ್ಲ. ಮೇ 27 ರಂದು ಅಳಿಯ ನಾಟಕವಾಡುತ್ತಿದ್ದಾನೆ ಎಂದು ಪದ್ಮಾಳ ಪೋಷಕರು ಅನುಮಾನಗೊಂಡು ಪೊಲೀಸರನ್ನು ಸಂಪರ್ಕಿಸಿದ್ದರು. ಸುದೀರ್ಘ ವಿಚಾರಣೆ ನಂತರ ವೇಣುಗೋಪಾಲ್ ಕೊಲೆ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಇದರ ಆಧಾರದಲ್ಲಿ ಪೊಲೀಸರು ಕೆರೆಯಲ್ಲಿ ಹೂತು ಹೋಗಿದ್ದ ಪದ್ಮಾಳ ಶವವನ್ನು ಹೊರ ತೆಗೆದು ವೇಣುಗೋಪಾಲ್ ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.