ತರಗತಿಯಲ್ಲಿ ಪಾಠ ಮಾಡುತ್ತಿರುವಾಗಲೇ ಶಾಲಾ ಶಿಕ್ಷಕರಿಗೆ ಹೃದಯಾಘಾತವಾಗಿ ಸಾವನ್ನಪ್ಪಿರೋ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಈ ಮೂಲಕ ತಮ್ಮ ದೈನಂದಿನ ಕಾರ್ಯಗಳಿಗೆ ಹಾಜರಾಗುವ ವ್ಯಕ್ತಿಗಳು ಹಠಾತ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ ಘಟನೆಗಳ ಸರಣಿ ತೆಲುಗು ರಾಜ್ಯಗಳಲ್ಲಿ ಮುಂದುವರೆದಿದೆ.
ವರದಿ ಪ್ರಕಾರ, ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ವೆಟಪಾಲೆಂ ಮಂಡಲದ ವಕವರಿ ಪಾಲೆಂ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಪಿ. ವೀರಬಾಬು (45) ಅವರು ತರಗತಿಯಲ್ಲಿದ್ದ ವೇಳೆ ಕುರ್ಚಿಯಲ್ಲಿ ಕುಳಿತು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶಿಕ್ಷಕರು ಏಕಾಏಕಿ ಚಲನವಲನವಿಲ್ಲದೆ ಕಂಡಿದ್ದರಿಂದ ಮಕ್ಕಳು ಶಾಲೆಯ ಇತರ ಶಿಕ್ಷಕರಿಗೆ ಮಾಹಿತಿ ನೀಡಿದರು. ಶಿಕ್ಷಕರು 108 ಆಂಬ್ಯುಲೆನ್ಸ್ ಗೆ ಕರೆ ಮಾಡಿದರು. ಆಂಬ್ಯುಲೆನ್ಸ್ ನಲ್ಲಿದ್ದ ಹೆಲ್ತ್ ಕೇರ್ ಉದ್ಯೋಗಿಯೊಬ್ಬರು ಶಿಕ್ಷಕರ ನಾಡಿಮಿಡಿತವನ್ನು ಪರಿಶೀಲಿಸಿದ್ದು, ಆದರೆ ಅವರು ಅದಾಗಲೇ ಮೃತಪಟ್ಟಿದ್ದರು. ಈ ಘಟನೆ ಮಕ್ಕಳನ್ನು ಬೆಚ್ಚಿ ಬೀಳಿಸಿದೆ. ಶಿಕ್ಷಕರ ಸಾವಿನಿಂದ ಶಾಲಾ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ.