
ಗಂಡು ಮಗುವನ್ನು ಪಡೆಯಬೇಕು ಎಂದು ಆಸೆ ಹೊಂದಿದ್ದ ಆಂಧ್ರಪ್ರದೇಶ ಗುಂಟೂರು ಜಿಲ್ಲೆಯ ಮಹಿಳೆಯು ಕಳೆದ ನಾಲ್ಕು ವರ್ಷಗಳಲ್ಲಿ ತನ್ನ ಮೂವರು ಹೆಣ್ಣು ಹಸುಗೂಸುಗಳನ್ನು ಕೈಯಾರೆ ಕೊಂದಿದ್ದಾಳೆ..! ಡಿಸೆಂಬರ್ 2ರಂದು ಜನಿಸಿದ ಮೂರನೇ ಮಗುವನ್ನು ಕೊಲೆಗೈದ ವೇಳೆಯಲ್ಲಿ ಈ ಆಘಾತಕಾರಿ ಘಟನೆಯು ಬೆಳಕಿಗೆ ಬಂದಿದೆ.
ಆರೋಪಿ ಮಹಿಳೆಯನ್ನು ಬೋಂಟ ಲಕ್ಷ್ಮೀ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ ನವಜಾತ ಶಿಶುವಿನ ಬಾಯಲ್ಲಿ ನೊರೆ ಬರುತ್ತಿದೆ ಎಂಬ ಮಾಹಿತಿ ಸಿಕ್ಕ ನಂತರ ಆರೋಗ್ಯ ಕಾರ್ಯಕರ್ತೆ ಎಂ ಸ್ವಪ್ನಾ ಲಕ್ಷ್ಮೀ ನಿವಾಸಕ್ಕೆ ಆಗಮಿಸಿದ್ದರು. ಹೆಣ್ಣು ಮಗುವನ್ನು ವೈದ್ಯಕೀಯ ಚಿಕಿತ್ಸೆಗಾಗಿ ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಯ್ತು.
ಮಾರನೇ ದಿನ ಸ್ವಪ್ನಾ ಲಕ್ಷ್ಮಿಯ ನಿವಾಸಕ್ಕೆ ಆಗಮಿಸಿದ ವೇಳೆ ಲಕ್ಷ್ಮೀ ತನ್ನ ಮಗು ಸಾವನ್ನಪ್ಪಿದೆ ಎಂದು ಸ್ವಪ್ನಾಳಿಗೆ ಹೇಳಿದ್ದಳು. ಅಲ್ಲದೆ ಮಗುವನ್ನು ಸಮಾಧಿ ಮಾಡಿದ್ದೇನೆ ಎಂತಲೂ ಹೇಳಿದ್ದಾಳೆ. ಇದರಿಂದ ಆರೋಗ್ಯ ಕಾರ್ಯಕರ್ತೆ ಸ್ವಪ್ನಾಗೆ ಲಕ್ಷ್ಮೀ ಮೇಲೆ ಅನುಮಾನ ಉಂಟಾಗಿದೆ. ಹೀಗಾಗಿ ಲಕ್ಷ್ಮೀಗೆ ಸರಿಯಾಗಿ ವಿಚಾರಣೆ ನಡೆಸಿದ ವೇಳೆ ಆಕೆ ಮಗುವನ್ನು ತಾನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಇದಾದ ಬಳಿಕ ಆಶಾ ಕಾರ್ಯಕರ್ತೆ ಸ್ವಪ್ನಾ ಪೊಲೀಸ್ ಠಾಣೆಯಲ್ಲಿ ಲಕ್ಷ್ಮೀ ವಿರುದ್ಧ ದೂರು ದಾಖಲಿಸಿದ್ದಾಳೆ. ದೂರನ್ನು ಆಧರಿಸಿದ ಪೊಲೀಸರು ಲಕ್ಷ್ಮೀಯನ್ನು ಬಂಧಿಸಿದ್ದಾರೆ.