ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಕ್ಷೇತ್ರದ ಚಿಲಮತ್ತೂರು ಮಂಡಲದಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆ ವರದಿಯಾಗಿದೆ.
ಅಕ್ಟೋಬರ್ 11 ರಂದು ತಡರಾತ್ರಿ ನಾಲ್ವರು ಅಪರಿಚಿತ ವ್ಯಕ್ತಿಗಳು ಪೇಪರ್ ಮಿಲ್ ಕಾರ್ಮಿಕನ ನಿವಾಸಕ್ಕೆ ಬಲವಂತವಾಗಿ ನುಗ್ಗಿ ಮಹಿಳೆ ಮತ್ತು ಆಕೆಯ ಸೊಸೆ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಅಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಅವರ ನಾಲ್ವರು ಕುಟುಂಬ ವಾಸಿಸುತ್ತಿದ್ದರು. ಮಧ್ಯರಾತ್ರಿಯ ಸುಮಾರಿಗೆ ಅವರ ಮನೆಯ ಹೊರಗೆ ಅನುಮಾನಾಸ್ಪದ ಶಬ್ದ ಕೇಳಿದ ನಂತರ ಕುಟುಂಬವು ಗಾಬರಿಗೊಂಡಿದೆ. ಮನೆಯ ಸಮೀಪದಲ್ಲಿ ದ್ವಿಚಕ್ರವಾಹನಗಳಲ್ಲಿ ಬಂದಿದ್ದ ಐವರು ಪತ್ತೆಯಾಗಿದ್ದು, ಮನೆಯವರು ಅವರನ್ನು ಪ್ರಶ್ನಿಸಿದಾಗ, ದುಷ್ಕರ್ಮಿಗಳು ತಂದೆ ಮತ್ತು ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ನಾಲ್ವರು ದಾಳಿಕೋರರು ಮನೆಗೆ ನುಗ್ಗಿ ಅತ್ತೆ ಮತ್ತು ಸೊಸೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಸಂತ್ರಸ್ತರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ದುಷ್ಕರ್ಮಿಗಳನ್ನು ಬಂಧಿಸಲು ಪೊಲೀಸರು ಶೋಧ ಆರಂಭಿಸಿದ್ದಾರೆ. ಪ್ರಕರಣದ ಕುರಿತು ನಾವು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಚಿಲಮತ್ತೂರು ಪೊಲೀಸ್ ಇನ್ಸ್ ಪೆಕ್ಟರ್ ಕೆ.ರಾಮಚಂದ್ರ ಹೇಳಿದ್ದಾರೆ.
ಶ್ರೀ ಸತ್ಯಸಾಯಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ), ರತ್ನಾ ಮಾತನಾಡಿ, ಬಳ್ಳಾರಿ ಮೂಲದ ಕುಟುಂಬವು ಐದು ತಿಂಗಳ ಹಿಂದೆ ನಲ್ಲಬೊಮ್ಮನಿಪಲ್ಲಿಯಲ್ಲಿ ನಿರ್ಮಾಣವಾಗುತ್ತಿರುವ ಕಾಗದದ ಗಿರಣಿಯಲ್ಲಿ ವಾಚ್‌ಮೆನ್ ಉದ್ಯೋಗಕ್ಕಾಗಿ ಈ ಪ್ರದೇಶಕ್ಕೆ ತೆರಳಿತ್ತು. ಮಚ್ಚಿನಿಂದ ಶಸ್ತ್ರಸಜ್ಜಿತರಾದ ದಾಳಿಕೋರರು ಹೇಯ ಕೃತ್ಯ ನಡೆಸುವ ಮುನ್ನ ತಂದೆ ಮತ್ತು ಮಗನನ್ನು ಕಟ್ಟಿ ಹಾಕಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.