ರಾಸಾಯನಿಕ ಮಿಶ್ರಿತ ಹಾನಿಕಾರಕ ಕೃಷಿ ಪದ್ಧತಿಯಲ್ಲಿ ಇಳುವರಿ ಹೆಚ್ಚು ಸಿಕ್ಕರೂ, ಭೂಮಿಯ ಫಲವತ್ತತೆ ಕಡಿಮೆ ಆಗುತ್ತದೆ. ಕೃಷಿ ಭೂಮಿ ಕೆಲವೇ ವರ್ಷಗಳಲ್ಲಿ ಬರಡುಭೂಮಿ ಆಗುತ್ತದೆ ಎನ್ನುವುದನ್ನು ದೇಶದ ಬಹುತೇಕ ರೈತರು ಮನಗಂಡಿದ್ದಾರೆ.
ಹಾಗಾಗಿ ರೈತರು ಸೇರಿದಂತೆ ನವೋತ್ಸಾಹಿ ಯುವಕರು ಸಾವಯವ ಕೃಷಿ ಪದ್ಧತಿ ಅಥವಾ ಆರ್ಗ್ಯಾನಿಕ್ ಫಾರ್ಮಿಂಗ್‌ಗೆ ಜೈಕಾರ ಹಾಕುತ್ತಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಿಜಾಮಪಟ್ನಂ ಪಂಚಾಯಿತಿಯ ನಾರಾಯಣ ಎನ್ನುವವರು ಕೂಡ ಸಾವಯವ ಕೃಷಿಗೆ ಮನಸೋತು, ತಮ್ಮ ಸಾಫ್ಟ್‌ವೇರ್ ಎಂಜಿನಿಯರ್ ವೃತ್ತಿಯನ್ನೇ ತೊರೆಯಲು ಮುಂದಾಗಿದ್ದಾರೆ.
ಮದುವೆ ಮಂಟಪದಿಂದಲೇ ವರನನ್ನು ಹೊತ್ತೊಯ್ದ ಪೊಲೀಸರು, ಕಾರಿನ ಹಿಂದೆ ಓಡಿದ ನವವಧು…!
ಕೊರೊನಾ ಸಾಂಕ್ರಾಮಿಕ ದಾಳಿ ಹಿನ್ನೆಲೆಯಲ್ಲಿ ದಂಡೇ ಯಗ್ನ ನಾರಾಯಣ ಅವರು ಅಮೆರಿಕದಿಂದ ಗುಂಟೂರು ಜಿಲ್ಲೆಯ ತಮ್ಮ ಗ್ರಾಮಕ್ಕೆ ಬಂದರು. ಇಲ್ಲಿಯೇ ವರ್ಕ್ ಫ್ರಮ್ ಹೋಂ ಮಾಡಿಕೊಂಡು, ಜತೆಗೆ ಕೃಷಿ ಭೂಮಿಯಲ್ಲಿ ಆಸಕ್ತಿದಾಯಕ ಕೆಲಸ ಮಾಡಿಕೊಂಡು ಕಾಲಕಳೆಯ ಹತ್ತಿದರು. ಅದರಲ್ಲೂ ತೆಲಂಗಾಣದಿಂದ ಭತ್ತದ ಬೀಜಗಳ ವಿವಿಧ ತಳಿಗಳನ್ನು ತರಿಸಿಕೊಂಡು ತಮ್ಮ ಕೃಷಿ ಭೂಮಿಯಲ್ಲಿ ಬಿತ್ತನೆ ಮಾಡಿದಾಗ ಅನುಸರಿಸಿದ ಸಾವಯವ ಕೃಷಿ ಪದ್ಧತಿಯು ನಾರಾಯಣ ಅವರ ಮನಗೆದ್ದಿತು.
ಅವರು ನಾಟಿ ಹಸುವಿನ ಮೂತ್ರ, ಒಂದು ಲೋಡ್ ಫಲವತ್ತಾದ ಮಣ್ಣು ಬಿಟ್ಟರೆ ಇತರ ರಾಸಾಯನಿಕಗಳನ್ನು ಭತ್ತಕ್ಕೆ ಸಿಂಪಡಿಸಲೇ ಇಲ್ಲ. ಇಲಿ ಹಾಗೂ ಇತರ ಪ್ರಾಣಿಗಳ ಕಾಟ ತಡೆಯಲು ಸ್ವಲ್ಪ ರಾಸಾಯನಿಕ ಔಷಧವನ್ನು ಜಮೀನಿನ ಕೆಲವು ಕಡೆಗಳಲ್ಲಿ ಬಳಸಿದ್ದು ಬಿಟ್ಟರೆ ನೈಸರ್ಗಿಕ ಮಾದರಿಯನ್ನೇ ಪೂರ್ಣವಾಗಿ ಆಶ್ರಯಿಸಿದರು. ಅಲ್ಲಿಗೆ ಒಂದು ಎಕರೆಗೆ ನಾರಾಯಣ ಅವರು ಮಾಡಿದ ವೆಚ್ಚ ಕೇವಲ 12 ಸಾವಿರ ರೂ. ಮಾತ್ರ. ಐದು ತಿಂಗಳಲ್ಲಿ ಅವರಿಗೆ ಹೆಚ್ಚಿನ ಇಳುವರಿಯಂತೆ 30 ಬ್ಯಾಗ್ ಭತ್ತದ ಬೆಳೆ ಕೈಸೇರಿದೆ. ಇದರಿಂದ ಕೃಷಿಯಲ್ಲಿ ನಾರಾಯಣ ಅವರ ಆಸಕ್ತಿ ಇಮ್ಮಡಿಗೊಂಡಿದೆ. ಇದರಲ್ಲೇ ಭವಿಷ್ಯ ಕಂಡುಕೊಳ್ಳುವ ನಿರ್ಣಯ ಮಾಡಿದ್ದಾರೆ. ಮತ್ತೆ ಅಮೆರಿಕಕ್ಕೆ ತೆರಳದೆಯೇ ಗ್ರಾಮದಲ್ಲೇ ನೆಲೆಸಲು ತೀರ್ಮಾನಿಸಿದ್ದಾರಂತೆ.