ಮೇಲು ಜಾತಿಯ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಹೊಸ ಶಾಲಾ ಕಟ್ಟಡವನ್ನು ನಿರ್ಮಿಸಿ ಪ್ರತ್ಯೇಕ ಸೌಲಭ್ಯಗಳನ್ನು ನೀಡಲಾಗಿದ್ದು ಈ ಹೊಸ ಕಟ್ಟಡಕ್ಕೆ ಕೆಳವರ್ಗದ ಕುಟುಂಬದ ಮಕ್ಕಳಿಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ ವಿಚಿತ್ರ ಘಟನೆಯು ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯ ಬ್ರಹ್ಮಪುರಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ವಿರುದ್ಧ ಈ ರೀತಿ ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಕಟ್ಟಡ ವಿಂಗಡಣೆ ಮಾಡಿರುವ ಆರೋಪ ಎದುರಾಗಿದೆ.
ಮಂಡಲ ಶಿಕ್ಷಣ ಇಲಾಖೆ ಅಧಿಕಾರಿಗಳು ಮೇಲ್ವರ್ಗದ ವಿದ್ಯಾರ್ಥಿಗಳಿಗೆ ಉತ್ತಮವಾದ, ಸುಸಜ್ಜಿತವಾದ ಹಾಗೂ ಹೊಸದಾಗಿ ನಿರ್ಮಿಸಲಾದ ಕಟ್ಟಡವನ್ನು ಒದಗಿಸಿದ್ದಾರೆ ಎಂದು ಕೆಳವರ್ಗದ ವಿದ್ಯಾರ್ಥಿಗಳ ಪೋಷಕರು ಆರೋಪ ಮಾಡಿದ್ದಾರೆ. ನಮ್ಮ ಮಕ್ಕಳನ್ನು ಹಳೆಯ ಕಟ್ಟಡದಲ್ಲೇ ಇರುವಂತೆ ಆದೇಶ ನೀಡಿದ್ದಾರೆ ಎಂದು ಪೋಷಕರು ಆರೋಪಿಸಿದ್ರು.
ಬ್ರಹ್ಮಪುರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 54 ಮಂದಿ ವಿದ್ಯಾರ್ಥಿಗಳಿದ್ದಾರೆ. ಆದರೆ ಸರ್ಕಾರಿ ಶಾಲೆ ನವೀಕರಣ ಯೋಜನೆಯ ಭಾಗವಾಗಿ 9 ಲಕ್ಷಕ್ಕೂ ಅಧಿಕ ಹಣ ಅನುದಾನದ ರೂಪದಲ್ಲಿ ಪಡೆದು ಈ ಹೊಸ ಕಟ್ಟಡವನ್ನು ನಿರ್ಮಿಸಲಾಗಿತ್ತು.
ಮೇಲ್ವರ್ಗದ ಜಾತಿಯ ಮಕ್ಕಳಿಗೆ ಹೊಸ ಕಟ್ಟಡ ನೀಡಲಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಸುಸಜ್ಜಿತ ಸೌಲಭ್ಯ ಕೂಡ ಇದೆ. ಆದರೆ ಉಳಿದ ವಿದ್ಯಾರ್ಥಿಗಳನ್ನು ಶಾಲೆಯ ಹಳೆಯ ಕಟ್ಟಡದಲ್ಲಿಯೇ ಇಡಲಾಗಿದೆ. ಈ ಶಾಲೆಯ ಸುಮಾರು 26 ವಿದ್ಯಾರ್ಥಿಗಳಿಗೆ ಈ ರೀತಿ ಅನ್ಯಾಯ ಎಸಗಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಶಾಲೆಯಲ್ಲಿ ಇಂತಹ ಜಾತಿಭೇದ ಮಾಡಲು ಗ್ರಾಮದ ಸರಪಂಚನೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.