ಆಘಾತಕಾರಿ ಘಟನೆಯೊಂದರಲ್ಲಿ, ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಜಿನ್ನಾ ಟವರ್‌ನಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ ಕಾರ್ಯಕರ್ತರ ಗುಂಪನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಭಾರತದ 73 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಹಿಂದೂ ವಾಹಿನಿ ಕಾರ್ಯಕರ್ತರು ಜಿನ್ನಾ ಟವರ್‌ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಪ್ರಯತ್ನಿಸಿದಾಗ, ಸ್ಥಳದಲ್ಲಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತೀಯರು ತ್ರಿವರ್ಣ ಧ್ವಜವನ್ನು ಆಯೋಜಿಸದಂತೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ತಡೆ ಹಿಡಿದಿದೆ ಎಂದು ವಾಗ್ದಾಳಿ ನಡೆಸಿದ ಬಿಜೆಪಿ ನಾಯಕರು ಘಟನೆಯ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಶ್ರೀನಗರದ ಲಾಲ್ ಚೌಕ್‌ನಲ್ಲಿ ಭಾರತದ ಧ್ವಜವನ್ನು ಹಾರಿಸುತ್ತಿರುವಾಗ, ವೈಎಸ್‌ಆರ್‌ಸಿಪಿ ಸರ್ಕಾರ ದೇಶದ ವಿಭಜಕ ಹೆಸರಿನ ಗೋಪುರದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ಬಿಡುತ್ತಿಲ್ಲ ಎಂದು ಬಿಜೆಪಿ ಸಂಸದ ಜಿವಿಎಲ್ ನರಸಿಂಹರಾವ್ ಟ್ವಿಟರ್ ನಲ್ಲಿ ಟೀಕಿಸಿದ್ದಾರೆ.
ಆಂಧ್ರಪ್ರದೇಶದ ಬಿಜೆಪಿ ಸಹ ಉಸ್ತುವಾರಿ ಸುನೀಲ್ ದಿಯೋಧರ್ ಕೂಡ, ಸಿಎಂ ರೆಡ್ಡಿ ಅವರನ್ನು ‘ಜಿನ್ನಾ ವೃತ್ತ’ ಭಾರತ ಗಣರಾಜ್ಯದ ಭಾಗವಾಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಲಾಲ್ ಚೌಕ್ ಕ್ಲಾಕ್ ಟವರ್ ನಲ್ಲಿ ತ್ರಿವರ್ಣ ಧ್ವಜ ಹಾರಾಟ
ದೇಶವು 73 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಶ್ರೀನಗರದ ಲಾಲ್ ಚೌಕ್ ಐತಿಹಾಸಿಕ ತ್ರಿವರ್ಣ ಧ್ವಜಾರೋಹಣಕ್ಕೆ ಸಾಕ್ಷಿಯಾಯಿತು. ಭಾರತವು ಬ್ರಿಟಿಷ್ ರಾಜ್ ನಿಂದ ಸ್ವಾತಂತ್ರ್ಯ ಪಡೆದ ನಂತರ ಸಾಂಪ್ರದಾಯಿಕ ಸ್ಥಳದಲ್ಲಿ ಮೊದಲನೆಯ ಬಾರಿಗೆ ಧ್ವಜ ಹಾರಾಡಿದೆ. ಜಮ್ಮು ಮತ್ತು ಕಾಶ್ಮೀರದ ಸಾಮಾಜಿಕ ಕಾರ್ಯಕರ್ತರು ಬೇಸಿಗೆ ರಾಜಧಾನಿಯ ನಗರದ ಚೌಕದಲ್ಲಿ ಭಾರತದ ರಾಷ್ಟ್ರೀಯ ಧ್ವಜವನ್ನು ಹಾರಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಶ್ರೀನಗರದ ಲಾಲ್ ಚೌಕ್ ನ ಗಡಿಯಾರ ಗೋಪುರದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ಕಾಶ್ಮೀರಿ ಕಾರ್ಯಕರ್ತರಾದ ಯೂಸುಫ್ ಮತ್ತು ಸಜ್ಜಿದ್ ಅವರು ಹಿಂದಿನ ಸರ್ಕಾರಗಳು ಪಕ್ಷಪಾತಿಯಾಗಿದ್ದ ಕಾರಣ 70 ವರ್ಷಗಳಲ್ಲಿ ಇದು(ತ್ರಿವರ್ಣ ಧ್ವಜದ ಅನಾವರಣ) ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಗಣರಾಜ್ಯೋತ್ಸವ 2022 ರಂದು, ಶ್ರೀನಗರದ ಲಾಲ್ ಚೌಕ್ ಗಡಿಯಾರ ಗೋಪುರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಲಾಗಿದೆ. ಹಿಂದಿನ ಸರ್ಕಾರಕ್ಕೆ ಇದು ದೊಡ್ಡ ವಿಷಯವಲ್ಲ, ಅವರು ಇದನ್ನು ಸುಲಭವಾಗಿ ಮಾಡಬಹುದಿತ್ತು. ಆದರೆ, ಮಾಡಲಿಲ್ಲ ಎಂದು ಅವರು ಹೇಳಿದ್ದಾರೆ.