ಅಮರಾವತಿ: ಲೆಸ್ಬಿಯನ್ ದಂಪತಿಗಳು ಒಟ್ಟಿಗೆ ವಾಸಿಸುವ ಹಕ್ಕನ್ನು ಆಂಧ್ರಪ್ರದೇಶ ಹೈಕೋರ್ಟ್ ಎತ್ತಿಹಿಡಿದಿದೆ, ತಮ್ಮ ಪಾಲುದಾರರನ್ನು ಆಯ್ಕೆ ಮಾಡುವ ಮತ್ತು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಅವರು ಹೊಂದಿದ್ದಾರೆ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಆರ್.ರಘುನಂದನ್ ರಾವ್ ಮತ್ತು ಕೆ.ಮಹೇಶ್ವರ ರಾವ್ ಅವರನ್ನೊಳಗೊಂಡ ನ್ಯಾಯಪೀಠ ಈ ನಿರ್ಧಾರ ಕೈಗೊಂಡಿದೆ. ತನ್ನ ಸಂಗಾತಿ ಲಲಿತಾ (ಹೆಸರು ಬದಲಾಯಿಸಲಾಗಿದೆ) ಅವರನ್ನು ನರಸೀಪಟ್ನಂನಲ್ಲಿರುವ ಅವರ ನಿವಾಸದಲ್ಲಿ ತನ್ನ ತಂದೆ ಕಾನೂನುಬಾಹಿರವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿ ಕವಿತಾ(ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿದೆ.
ಈ ಜೋಡಿ ವಿಜಯವಾಡದಲ್ಲಿ ಕಳೆದ ಒಂದು ವರ್ಷದಿಂದ ಸಹಜೀವನದಲ್ಲಿದ್ದಾರೆ. ಸೆಪ್ಟೆಂಬರ್ ನಲ್ಲಿ ಲಲಿತಾ ಕುಟುಂಬ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದಾದ ನಂತರ ತನ್ನ ಸಂಗಾತಿ ಕಾಣೆಯಾಗಿದ್ದಾರೆ ಎಂದು ಕವಿತಾ ಪೊಲೀಸರಿಗೆ ದೂರು ಕೊಟ್ಟಿದ್ದರು. ತನಿಖೆಯ ವೇಳೆ ಯುವತಿಯ ಪೋಷಕರು ಆಕೆಯನ್ನು ನರಸೀಪಟ್ಟಣದಲ್ಲಿ ಅಕ್ರಮವಾಗಿ ಬಂಧಿಸಿಟ್ಟಿರುವುದು ಗೊತ್ತಾಗಿದೆ. ಕವಿತಾ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ದಂಪತಿಗಳ ಸಂಬಂಧದಲ್ಲಿ ಮಧ್ಯಪ್ರವೇಶಿಸದಂತೆ ಲಲಿತಾ ಅವರ ಪೋಷಕರಿಗೆ ನ್ಯಾಯಾಲಯವು ನಿರ್ದೇಶನ ನೀಡಿ ತನ್ನ ತೀರ್ಪಿನಲ್ಲಿ ತಿಳಿಸಿದೆ. ತಮ್ಮ ಮಗಳು ತನ್ನ ಸ್ವಂತ ಆಯ್ಕೆಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿರುವ ಕಾನೂನುಬದ್ಧ ವಯಸ್ಕಳು ಎಂದು ತಿಳಿಸಿದೆ.