ಗುಂಟೂರು: ಆಂಧ್ರಪ್ರದೇಶದಾದ್ಯಂತ ರಣಭೀಕರ ಮಳೆಯಾಗುತ್ತಿದ್ದು, ಗುಂಟೂರಿನಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಪ್ರವಾಹದ ಅಬ್ಬರಕ್ಕೆ ಸಿಲುಕಿದ ಕಾರೊಂದು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇಬ್ಬರು ಶಾಲಾ ಮಕ್ಕಳು ಸೇರಿ ಮೂವರು ಸಾವನ್ನಪ್ಪಿರುವ ಘಟಬೆ ಗುಂಟೂರಿನ ಪೆದಕಕಣಿ ಮಂಡಲದ ಉಪ್ಪಲಪಾಡು ಎಂಬಲ್ಲಿ ನಡೆದಿದೆ.
ಮೃತರನ್ನು ರಾಘವೇಂದ್ರ, ಸಾತ್ವಿಕ್ ಮತ್ತು ಮಾನ್ವಿತಾ ಎಂದು ಗುರುತಿಸಲಾಗಿದೆ. ಭಾರೀ ಮಳೆಯಿಂದಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಶಾಲೆಗೆ ಹೋಗಿದ್ದ ಇಬ್ಬರು ಮಕ್ಕಳನ್ನು ಮನೆಗೆ ಕರೆತರುತ್ತಿದ್ದಾಗ ನದಿಯಲ್ಲಿ ಪ್ರವಾಹ ಇದ್ದಕ್ಕಿದ್ದಂತೆ ಹೆಚ್ಚಿದೆ.
ಈ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನದಿ ಏಕಾಏಕಿ ಪ್ರವಾಹದಂತೆ ಉಕ್ಕಿ ಹರಿಯಲಾರಂಭಿಸಿದ್ದು, ಕಾರು ನದಿಯಲ್ಲಿ ಕೊಚ್ಚಿ ಹೋಗಿದೆ. ಕಾರಿನಿಂದ ಹೊರಬರಲಾಗದೇ ಮೂವರು ಕಾರಿನ ಸಮೇತ ಜಲಸಮಾಧಿಯಾಗಿದ್ದಾರೆ.
ಸ್ಥಳೀಯ ಅಧಿಕಾರಿಗಳು ಮತ್ತು ತುರ್ತು ಸೇವೆಗಳು ಘಟನಾ ಸ್ಥಳಕ್ಕೆ ಧಾವಿಸಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿದರೂ ಮೂವರನ್ನು ಬದುಕಿಸಲು ಸಾಧ್ಯವಾಗಿಲ್ಲ.