
ಕೊರೊನಾ ವೈರಸ್ ನಿಂದ ಚೇತರಿಸಿಕೊಂಡು ಮನೆಗೆ ಬಂದ 75 ವರ್ಷದ ಮಹಿಳೆ ನೋಡಿ ಕುಟುಂಬಸ್ಥರು ಅಚ್ಚರಿಗೊಂಡಿದ್ದಾರೆ. ಮುತ್ಯಲಾ ಗಿರಿಜಮ್ಮ ಹೆಸರಿನ ಮಹಿಳೆಯ ಅಂತ್ಯಸಂಸ್ಕಾರವನ್ನು ಕುಟುಂಬಸ್ಥರು ಮಾಡಿದ್ದರು. ಆದ್ರೆ ಅಂತ್ಯಸಂಸ್ಕಾರ ನಡೆದ 15 ದಿನಗಳ ನಂತ್ರ ಗಿರಿಜಮ್ಮ ಮನೆಗೆ ಬಂದಿದ್ದಳು.
ಮೇ 12ರಂದು ವಿಜಯವಾಡದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಗಿರಿಜಮ್ಮರನ್ನು ದಾಖಲಿಸಲಾಗಿತ್ತು. ಕೊರೊನಾ ವೈರಸ್ ಪಾಸಿಟಿವ್ ಬಂದ್ಮೇಲೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪತಿ ಮನೆಗೆ ಬಂದಿದ್ದರು. ಮೇ 15ರಂದು ಗಿರಿಜಮ್ಮ ಪತಿ ಮತ್ತೆ ಆಸ್ಪತ್ರೆಗೆ ಹೋಗಿದ್ದಾರೆ. ಆದ್ರೆ ಗಿರಿಜಮ್ಮ ಬೆಡ್ ನಲ್ಲಿರಲಿಲ್ಲ. ಸಿಬ್ಬಂದಿ ಹೇಳಿಕೆ ಮೇರೆಗೆ ಎಲ್ಲ ವಾರ್ಡ್ ಚೆಕ್ ಮಾಡಿದ್ದಾರೆ. ಕೊನೆಯದಾಗಿ ಶವಾಗಾರಕ್ಕೆ ಹೋಗಿದ್ದಾರೆ.
ಅಲ್ಲಿ ಪತ್ನಿ ಹೋಲುತ್ತಿದ್ದ ಶವವನ್ನು ಮನೆಗೆ ತಂದು ಅಂತ್ಯಸಂಸ್ಕಾರ ಮಾಡಿದ್ದಾರೆ. ಮೇ 24ರಂದು ಕುಟುಂಬಸ್ಥರು ಪ್ರಾರ್ಥನಾ ಸಭೆಯನ್ನು ಆಯೋಜಿಸಿದ್ದರು. ಆಸ್ಪತ್ರೆಗೆ ಯಾರು ಬರಲಿಲ್ಲವೆಂಬ ಆತಂಕದಲ್ಲಿದ್ದ ಗಿರಿಜಮ್ಮ ಕೊರೊನಾ ಗೆದ್ದು ಮನೆಗೆ ವಾಪಸ್ ಆಗಿದ್ದಾರೆ. ಮನೆ ಬಾಗಿಲಿಗೆ ಗಿರಿಜಮ್ಮ ಬಂದಿರುವುದನ್ನು ನೋಡಿದ ಕುಟುಂಬಸ್ಥರು ದಂಗಾಗಿದ್ದಾರೆ.