
ಹೈದರಾಬಾದ್: ದೇಶದಾದ್ಯಂತ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಇದೇ ವೇಳೆ ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಕೂಡ ನಡೆಯುತ್ತಿದೆ. ಆಂಧ್ರಪ್ರದೇಶದಲ್ಲಿ ಮತದಾನದ ವೇಳೆ ಹಿಂಸಾಚಾರ ನಡೆದಿರುವ ಬಗ್ಗೆ ವರದಿಯಾಗಿದೆ.
ತೆನಾಲಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರನ ಮೇಲೆ ಶಾಸಕರೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೇ ಬೆಂಬಲಿಗರು ಮನಬಂದಂತೆ ಥಳಿಸಿರುವ ಅಮಾನುಷ ಘಟನೆ ನಡೆದಿದೆ. ಮತದಾರನಿಗೆ ಹೊಡೆಯುತ್ತಿರುವ ದೃಶ್ಯ ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗಿದೆ.
ಮತದಾನದ ವೇಳೆ ಸರತಿ ಸಾಲಿನಲ್ಲಿ ಬಂದು ಮತ ಹಾಕಿ ಎಂದ ಮತದಾರನಿಗೆ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಶಾಸಕ ಎ. ಶಿವಕುಮಾರ್ ಕಪಾಳಮೋಕ್ಷ ಮಾಡಿದ್ದಾರೆ. ಶಾಸಕ ಕಪಾಳಮೋಕ್ಷ ಮಾಡಿದ್ದನ್ನು ಮತದಾರ ಪ್ರಶ್ನಿಸುತ್ತಿದ್ದಂತೆ ಶಾಸಕರ ಬೆಂಬಲಿಗರು ಆತನ ಮೇಲೆ ಮುಗಿಬಿದ್ದು ಮನಸೋಇಚ್ಛೆ ಥಳಿಸಿದ್ದಾರೆ. ಮತದಾಕ್ಕೆಂದು ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯರು ಸೇರಿದಂತೆ ಹಲವರು ಭಯಗೊಂಡು ಸ್ಥಳದಿಂದ ಓಡಿದ್ದಾರೆ.
ಆಂಧ್ರ ಪ್ರದೇಶದ ತೆನಾಲಿ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ಶಾಸಕ ಎ.ಶಿವಕುಮಾರ್ ಹಾಗೂ ಬೆಂಬಲಿಗರ ವರ್ತನಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇನ್ನೊಂದೆಡೆ ಗುಂಟೂರು ಜಿಲ್ಲೆಯಲ್ಲಿ ಮತಗಟ್ಟೆಗೆ ನುಗ್ಗಿದ ಕೆಲ ಉದ್ರಿಕ್ತರ ಗುಂಪು ಇವಿಎಂ, ಪೀಠೋಪಕರಣಗಳನ್ನು ಧ್ವಂಸಗೊಳಿಸಿದೆ. ಅಲ್ಲದೇ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ದೊಣ್ಣೆಯಿಂದ ಒಡೆದು ಪುಡಿ ಪುಡಿ ಮಾಡಿದ್ದಾರೆ. ಬೈಕ್ ಗಳನ್ನು ಜಖಂಗೊಳಿಸಿದ್ದಾರೆ. ರಸ್ತೆಗಳಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಒಟ್ಟಾರೆ ಆಂಧ್ರಪ್ರದೇಶದಲ್ಲಿ ಮತದಾನದ ವೇಳೆ ಹಲವೆಡೆ ಗಲಾಟೆ, ಹಿಂಸಾಚಾರ ನಡೆದಿದೆ ಎಂದು ತಿಳಿದುಬಂದಿದೆ.