ಅಮರಾವತಿ: ಆಂಧ್ರಪ್ರದೇಶದ ಕಡಪಾ ಪೊಲೀಸರು ಸೋಮವಾರ ವೈ.ಎಸ್.ಆರ್.ಸಿ.ಪಿ. ನಾಯಕ ಮತ್ತು ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸೋದರ ಸಂಬಂಧಿಯನ್ನು ಬಂಧಿಸಿದ್ದಾರೆ.
ಚಕ್ರಯಾಪೇಟ್ ಮಂಡಲ್ ನಲ್ಲಿ ನಿರ್ಮಾಣ ಕಂಪನಿಯ ಮಾಲೀಕರಿಂದ ಲಂಚಕ್ಕೆ ಬೇಡಿಕೆಯಿಟ್ಟ ಮತ್ತು ಪಡೆದ ಆರೋಪದ ಮೇಲೆ ಸಿಎಂ ಸಂಬಂಧಿ ಬಂಧಿತರಾಗಿದ್ದಾರೆ.
ಆರೋಪಿ ವೈ.ಎಸ್. ಕೊಂಡ ರೆಡ್ಡಿ ಅವರು ಮುಖ್ಯಮಂತ್ರಿಗಳ ತವರು ಜಿಲ್ಲೆ ವೈಎಸ್ಆರ್ ಕಡಪ ಜಿಲ್ಲೆಯ ಚಕ್ರಾಯಪೇಟೆ ಮಂಡಲದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿದ್ದಾರೆ.
ಕಡಪಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಕೆ.ಎನ್. ಅನ್ಬುರಾಜನ್ ಮಾತನಾಡಿ, ವೇಂಪಲ್ಲೆ ಮತ್ತು ರಾಯಚೋಟಿ ನಡುವೆ ರಸ್ತೆ ನಿರ್ಮಿಸಲು ನಿರ್ಮಾಣ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಕೆಲವು ತಿಂಗಳಿನಿಂದ ಕಾಮಗಾರಿ ಪ್ರಗತಿಯಲ್ಲಿದೆ. ಮೇ 5 ರಂದು, ಪುಲಿವೆಂದುಲಾ ಪಟ್ಟಣದ ನಿವಾಸಿ ವೈ.ಎಸ್.ಕೊಂಡಾ ರೆಡ್ಡಿ ಅವರು ನಿರ್ಮಾಣ ಸಂಸ್ಥೆಯ ಮಾಲೀಕರಿಗೆ ಬೆದರಿಕೆ ಹಾಕಿದರು, ಕಾಮಗಾರಿಯನ್ನು ಮುಂದುವರೆಸಲು ಲಂಚಕ್ಕೆ ಒತ್ತಾಯಿಸಿದರು. ಸರ್ಕಾರದ ಮೇಲೆ ಪ್ರಭಾವ ಬೀರಿ ನಡೆಯುತ್ತಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ತಿಳಿಸಿದ್ದಾರೆ.
ನಿರ್ಮಾಣ ಸಂಸ್ಥೆ ಮಾಲೀಕರು ಚಕ್ರಾಯಪೇಟೆ ಮಂಡಲ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಮೇ 5 ರಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೋಮವಾರ ಗುತ್ತಿಗೆದಾರರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ವೈಎಸ್ ಕೊಂಡ ರೆಡ್ಡಿಯನ್ನು ಬಂಧಿಸಿದ್ದಾರೆ.