ಹೈದರಾಬಾದ್: ಆರೋಗ್ಯ ಸರಿ ಇಲ್ಲದ ಮಗುವಿನೊಂದಿಗೆ ಮಹಿಳೆ ನೆರವು ಯಾಚಿಸುವುದನ್ನು ಗಮನಿಸಿದ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ತಮ್ಮ ಬೆಂಗಾವಲು ಪಡೆ ನಿಲ್ಲಿಸಿ ಸಹಾಯ ಮಾಡಿದ್ದಾರೆ. ಜಗನ್ ಮೋಹನ್ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ವಾಹನದಿಂದ ಕೆಳಗಿಳಿದು ಬಾಲಕನ ಆರೋಗ್ಯ ವಿಚಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಕಿನಾಡ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಜಗನ್ ರೆಡ್ಡಿ, ಜನಸಾಗರದ ನಡುವೆ ಮಹಿಳೆಯೊಬ್ಬರು ತನ್ನ ಮಗನನ್ನು ಕೈಯಲ್ಲಿ ಹಿಡಿದುಕೊಂಡು ಮಗನ ಅನಾರೋಗ್ಯದ ಕಾರಣ ಸಹಾಯ ಕೇಳುತ್ತಿರುವುದನ್ನು ಗಮನಿಸಿದರು. ಇದನ್ನು ನೋಡಿದ ರೆಡ್ಡಿ ತನ್ನ ಬೆಂಗಾವಲು ವಾಹನ ನಿಲ್ಲಿಸಿ ಮಹಿಳೆಯನ್ನು ಭೇಟಿ ಮಾಡಲು ಹೋಗಿದ್ದಾರೆ.
ಪ್ರತಿಪಾಡು ಕ್ಷೇತ್ರದ ವ್ಯಾಪ್ತಿಯ ಶಂಖವರಂ ಮಂಡಲದ ಮಂಟಪಂ ಗ್ರಾಮದ ತನುಜಾ ಅವರು ತಮ್ಮ ಮಗನ ಆರೋಗ್ಯ ಸ್ಥಿತಿಯನ್ನು ಮುಖ್ಯಮಂತ್ರಿಗೆ ವಿವರಿಸಿ ಸಹಾಯ ಕೋರಿದರು. ಮಹಿಳೆ ಮತ್ತು ಅವರ ಮಗನಿಗೆ ತಕ್ಷಣ ಸಹಾಯ ನೀಡುವಂತೆ ಜಗನ್ ಜಿಲ್ಲಾಧಿಕಾರಿಗೆ ಸೂಚಿಸಿದರು. ಎರಡು ಗಂಟೆಯೊಳಗೆ ಜಿಲ್ಲಾಧಿಕಾರಿಗಳು ಬಾಲಕನ ತಾಯಿಗೆ 10 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿ ಸೆಪ್ಟೆಂಬರ್ ನಿಂದ ಮಾಸಿಕ ಪಿಂಚಣಿ ಮಂಜೂರು ಮಾಡಿದರು.