ಹೈದರಾಬಾದ್: ಕೊರೋನಾ ಸೋಂಕಿನಿಂದ ಜನ ಕಂಗಾಲಾಗಿರುವ ಹೊತ್ತಲ್ಲಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನೂರಾರು ಮಂದಿಗೆ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದೆ.
227 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಇವರಿಗೆ ತಲೆನೋವು, ವಾಂತಿ, ಸುಸ್ತು ಆಗಿ ಆತಂಕ ಸೃಷ್ಟಿಸಿದೆ. ಏಲೂರಿನ ನಾರ್ತ್ ಸ್ಟ್ರೀಟ್, ಸೌತ್ ಸ್ಟ್ರೀಟ್, ಆರುಂಧತಿ ಪೇಟ್, ಅಶೋಕನಗರ ಮೊದಲಾದ ಪ್ರದೇಶಗಳಲ್ಲಿ ಶನಿವಾರ ತಡರಾತ್ರಿ ಜನರಲ್ಲಿ ಏಕಾಏಕಿ ಈ ರೀತಿ ವಿಚಿತ್ರ ಸ್ವರೂಪ ಕಾಯಿಲೆ ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಸಿದೆ.
ಈ ರೀತಿ ರೋಗ ಲಕ್ಷಣ ಕಂಡು ಬಂದವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಮಧ್ಯಾಹ್ನದವರೆಗೆ 227 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ರೀತಿ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದು ವೈದ್ಯಾಧಿಕಾರಿ ಡಾ. ಮೋಹನ್ ಹೇಳಿದ್ದಾರೆ.
ವಿಪರೀತ ತಲೆನೋವು, ವಾಂತಿ ಮತ್ತು ತಲೆಸುತ್ತು ಕಂಡು ಬರುತ್ತಿದೆ. ಕಲುಷಿತ ನೀರು ಕುಡಿದ ಕಾರಣ ಈ ರೀತಿ ಆಗಿರಬಹುದೆಂದು ಹೇಳಲಾಗಿದ್ದರೂ ಸ್ಥಳೀಯ ಆಡಳಿತ ದೃಢಪಡಿಸಿಲ್ಲ. ರೋಗಿಗಳ ರಕ್ತದ ಮಾದರಿ ಮತ್ತು ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ವ್ಯವಸ್ಥೆ ಹೆಚ್ಚಿಸಲಾಗಿದೆ.
ವಿಜಯವಾಡದಲ್ಲಿ ಇದೇ ರೋಗ ಲಕ್ಷಣಗಳಿರುವ 45 ವರ್ಷದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆತಂಕ ಹೆಚ್ಚಿಸಿದೆ. ಸಿಎಂ ಜಗನ್ ಮೋಹನ್ ರೆಡ್ಡಿ ತನಿಖೆಗೆ ಆದೇಶ ನೀಡಿದ್ದಾರೆ. ಆರೋಗ್ಯ ಸಚಿವರು ಆಸ್ಪತ್ರೆಗೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.