ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ ಕಾಣಿಸಿಕೊಂಡಿರುವ ನಿಗೂಢ ಕಾಯಿಲೆ ಸ್ಥಳೀಯರ ನಿದ್ದೆಗೆಡಿಸಿದೆ. ರೋಗದಿಂದ ಬಳಲುತ್ತಿರುವವರ ರಕ್ತದ ಮಾದರಿಗಳನ್ನ ಪರೀಕ್ಷಿಸಲಾಗಿದ್ದು, ಅದರಲ್ಲಿ ಸೀಸ ಹಾಗೂ ನಿಕ್ಕಲ್ನಂತಹ ಲೋಹಗಳು ಪತ್ತೆಯಾಗಿದೆ.
ರಕ್ತದ ಮಾದರಿ ಪರೀಕ್ಷೆ ಬಳಿಕ ಮಾತನಾಡಿದ ಗೋದಾವರಿ ಜಿಲ್ಲೆಯ ಜಂಟಿ ಸಂಗ್ರಾಹಕ ಹಿಮಾಂಶು ಶುಕ್ಲಾ, ನಾವು ರಕ್ತದ ಮಾದರಿಗಳಲ್ಲಿ ಸೀಸ ಹಾಗೂ ನಿಕ್ಕಲ್ ಹೆಚ್ಚಿನ ಪ್ರಮಾಣದಲ್ಲಿ ಇರೋದನ್ನ ಕಂಡುಕೊಂಡಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಈ ರಕ್ತದ ಮಾದರಿಗಳನ್ನ ಅಖಿಲ ಭಾರತ ವೈದ್ಯಕೀಯ ಸಂಸ್ಥೆಗೆ ಕಳುಹಿಸಲಿದ್ದೇವೆ.
ಈಗಾಗಲೇ ಈ ಪ್ರದೇಶದ ನೀರು ಹಾಗೂ ಹಾಲಿನ ಮಾದರಿಗಳನ್ನ ಪರೀಕ್ಷಿಸಲಾಗಿದ್ದು, ಇವೆರಡರಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ. ತರಕಾರಿ ಹಾಗೂ ಸಿಹಿ ತಿನಿಸಿಗಳನ್ನೂ ಪರೀಕ್ಷೆ ಮಾಡಲಾಗಿದೆ ಅಂತಾ ಭಾರತೀಯ ಆಡಳಿತ ಸೇವಾ ಅಧಿಕಾರಿ ಹೇಳಿದ್ದಾರೆ.
ಈ ಮಧ್ಯೆ ಕಾಯಿಲೆಗೀಡಾದವರ ಸಂಖ್ಯೆ 551ಕ್ಕೆ ಏರಿಕೆಯಾಗಿದೆ. ಇದರಲ್ಲಿ 174 ಸಕ್ರಿಯ ಪ್ರಕರಣಗಳಿದ್ದು, 350 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಭಾನುವಾರ ಒಂದು ಸಾವಿನ ಪ್ರಕರಣ ವರದಿಯಾಗಿದೆ.