ವಿಜಯವಾಡ: ವಿಚ್ಛೇದನದ ವಿಚಾರದಲ್ಲಿ ಆಂಧ್ರದ ವ್ಯಕ್ತಿಯೊಬ್ಬ ಪತ್ನಿಗೆ ಹೆಚ್ಐವಿ ಚುಚ್ಚುಮದ್ದು ನೀಡಿದ್ದಾನೆ. ತನ್ನ ಗರ್ಭಿಣಿ ಪತ್ನಿಗೆ ವಿಚ್ಛೇದನ ನೀಡಲು ಇಂತಹ ಕೃತ್ಯವೆಸಗಿದ್ದಾನೆ.
ತಾಡೆಪಲ್ಲಿಯ ಚರಣ್ ಎಂಬಾತ ಪತ್ನಿಗೆ ಹೆಚ್ಐವಿ ಸೋಂಕಿತ ರಕ್ತವನ್ನು ಚುಚ್ಚಿದ್ದಾನೆ. ಆತನ ಪತ್ನಿ ದೂರು ನೀಡಿದ ನಂತರ, ತಾಡೆಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗಾಗಿ ಎಂ. ಚರಣ್(40) ನನ್ನು ವಶಕ್ಕೆ ಪಡೆದಿದ್ದಾರೆ.
ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ ಬಳಿಕ ತಾನು ಹೆಚ್ಐವಿ ಪಾಸಿಟಿವ್ ಎಂದು ಇತ್ತೀಚೆಗಷ್ಟೇ ತಿಳಿದುಕೊಂಡಿದ್ದೇನೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಆರೋಪಿಯು ತನ್ನನ್ನು ದೂರ ಮಾಡಲು ಯೋಜನೆ ರೂಪಿಸಿದ್ದ. ಉತ್ತಮ ಆರೋಗ್ಯಕ್ಕಾಗಿ ಚುಚ್ಚುಮದ್ದನ್ನು ನೀಡುವುದಾಗಿ ಭರವಸೆ ನೀಡಿ ಹೆಚ್ಐವಿ ಇಂಜೆಕ್ಷನ್ ನೀಡಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ದಂಪತಿಗೆ ಒಬ್ಬ ಮಗಳಿದ್ದಾಳೆ. ಮದುವೆಯ ನಂತರ ಅನ್ಯೋನ್ಯವಾಗಿದ್ದರು, ಕೆಲವು ವರ್ಷಗಳನಂತರ ಪತಿ ಚರಣ್ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ. 2018 ರಿಂದ ಗಂಡು ಮಗುವನ್ನು ಹೊಂದುವಂತೆ ಒತ್ತಾಯಿಸುತ್ತಿದ್ದ. ತನ್ನ ಪತಿ ವಿಶಾಖಪಟ್ಟಣಂನ 21 ವರ್ಷದ ಯುವತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದನೆಂದು ಅಪತ್ನಿ ತಿಳಿಸಿದ್ದಾಳೆ.
ಅವನು ತನ್ನನ್ನು ಬಿಡುವಂತೆ ಕಿರುಕುಳ ಮತ್ತು ಒತ್ತಡ ಹೇರಲು ಪ್ರಾರಂಭಿಸಿದ್ದ. ಸಂತ್ರಸ್ತೆ ಇತ್ತೀಚೆಗೆ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಹೋದಾಗ ಆಕೆಗೆ ಹೆಚ್ಐವಿ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಶುಕ್ರವಾರ ತಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವ್ಯಕ್ತಿಯನ್ನು ಬಂಧಿಸಿದ್ದಾರೆ.