ಕೊರೊನಾ ವೈರಸ್ ತಗಲುತ್ತೆ ಎಂಬ ಭಯದಲ್ಲಿ ಕುಟುಂಬವೊಂದು ಬರೋಬ್ಬರಿ 15 ತಿಂಗಳುಗಳ ಕಾಲ ಪ್ರತ್ಯೇಕ ಟೆಂಟ್ನಲ್ಲೇ ವಾಸವಾಗಿದ್ದು, ಈ ಕುಟುಂಬವನ್ನ ಬುಧವಾರ ಪೊಲೀಸರು ರಕ್ಷಿಸಿದ್ದಾರೆ.
ಆಂದ್ರ ಪ್ರದೇಶದ ಕಡಾಲಿ ಎಂಬ ಗ್ರಾಮದಲ್ಲಿ ಈ ವಿಚಿತ್ರ ಘಟನೆ ಸಂಭವಿಸಿದೆ. ಪೊಲೀಸರು ವಿಚಾರಿಸಿದ ವೇಳೆ ಈ ಕುಟುಂಬ ಕೊರೊನಾ ವೈರಸ್ ತಗಲುತ್ತೆ ಎಂಬ ಭಯದ ಹಿನ್ನೆಲೆಯಲ್ಲಿ ತಾವು ಈ ರೀತಿ ವಾಸವಿದ್ದಿದ್ದಾಗಿ ಹೇಳಿಕೊಂಡಿದೆ.
ಕಡಲಿ ಗ್ರಾಮದ ಸರಪಂಚ್ ಚೊಪ್ಪಲ ಗುರುನಾಥ್ ನೀಡಿರುವ ಮಾಹಿತಿಯ ಪ್ರಕಾರ 50 ವರ್ಷದ ರತ್ನಮಾಲಾ, 32 ವರ್ಷದ ಕಾಂತಾಮಣಿ ಹಾಗೂ 30 ವರ್ಷದ ರಾಣಿ ಎಂಬವರು 15 ತಿಂಗಳ ಹಿಂದೆ ಟೆಂಟ್ ಒಂದರಲ್ಲಿ ತಮ್ಮನ್ನ ತಾವು ಲಾಕ್ ಮಾಡಿಕೊಂಡಿದ್ದರು. 15 ತಿಂಗಳ ಹಿಂದೆ ಇವರ ನೆರೆಮನೆಯವರು ಕೋವಿಡ್ 19ನಿಂದ ಮೃತರಾದ ಹಿನ್ನೆಲೆ ಈ ಕುಟುಂಬ ಕಠಿಣ ನಿರ್ಧಾರ ಕೈಗೊಂಡಿತ್ತು.
ಇನ್ನು ಈ ವಿಚಾರವಾಗಿ ಮಾತನಾಡಿದ ಸರಪಂಚ್ ಗುರುನಾಥ್, ಚುಟ್ಟುಗಲ್ಲಾ ಬೆನ್ನಿ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಈ ಮನೆಯಲ್ಲಿ ವಾಸವಿದ್ದಾರೆ. ಕೊರೊನಾದಿಂದ ಹೆದರಿಕೊಂಡು ಕಳೆದ 15 ತಿಂಗಳಿನಿಂದ ಇವರು ಮನೆಬಿಟ್ಟು ಆಚೆಯೇ ಬಂದಿಲ್ಲ. ಆಶಾ ಕಾರ್ಯಕರ್ತೆಯೊಬ್ಬರು ಇವರ ಮನೆಗೆ ಭೇಟಿ ನೀಡಿದ್ದ ವೇಳೆ ಯಾರೂ ಪ್ರತಿಕ್ರಿಯೆ ನೀಡದ್ದನ್ನ ಗಮನಿಸಿ ನಮಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಅವರ ಸಂಬಂಧಿಗಳು ಈ ಮನೆಯಲ್ಲಿ ಮೂವರು ತಮ್ಮನ್ನ ತಾವು ಲಾಕ್ ಮಾಡಿಕೊಂಡಿದ್ದು ಮೂವರ ಆರೋಗ್ಯ ಸ್ಥಿತಿಯು ಹದಗೆಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ರು.
ಈ ಎಲ್ಲಾ ವಿಚಾರಗಳು ನಮಗೆ ತಿಳಿಯುತ್ತಿದ್ದಂತೆ ನಾವು ಆ ಸ್ಥಳಕ್ಕೆ ಭೇಟಿ ನೀಡಿದ್ದು ಮಾತ್ರವಲ್ಲದೇ ಪೊಲೀಸರಿಗೂ ಮಾಹಿತಿ ನೀಡಿದೆವು. ಪೊಲೀಸರು ಮನೆಯ ಸದಸ್ಯರನ್ನ ಹೊರಗೆ ಕರೆಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಎಷ್ಟೋ ದಿನಗಳಿಂದ ಸ್ನಾನವನ್ನೇ ಮಾಡಿರಲಿಲ್ಲ. ಅಲ್ಲದೇ ಎಲ್ಲರೂ ಅನಾರೋಗ್ಯದಿಂದ ಬಳಲುತ್ತಿದ್ದರು. ಕೂಡಲೇ ಮೂವರನ್ನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯ್ತು ಎಂದು ಗುರುನಾಥ್ ಹೇಳಿದ್ರು.