ಮೂರನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ನಡುರಸ್ತೆಯಲ್ಲಿ ಇರಿದು ಕೊಲೆ ಮಾಡಿದ ದಾರುಣ ಘಟನೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಭಾನುವಾರ ನಡೆದಿದೆ. ಈ ಭಯಾನಕ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೃತದೇಹವನ್ನು ಇರಿಸಲಾಗಿದ್ದ ಸರ್ಕಾರಿ ಆಸ್ಪತ್ರೆಗೆ ಆಂಧ್ರ ಪ್ರದೇಶ ಗೃಹ ಮಂತ್ರಿ ಎಂ ಸುಚರಿತಾ ಭೇಟಿ ನೀಡಿದ್ದಾರೆ. ಹಾಗೂ ಈ ಘಟನೆ ಸಂಬಂಧ ಕಳವಳ ವ್ಯಕ್ತಪಡಿಸಿದ್ದಾರೆ.
ತಡರಾತ್ರಿ ಈ ವಿಚಾರವಾಗಿ ಮಾತನಾಡಿದ್ದ ಡಿಸಿಪಿ ಡಿಜಿ ಸಾವಂಗ್, ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಿಸಿ ಟಿವಿ ದೃಶ್ಯಾವಳಿ ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯಿಂದಾಗಿ ನಮಗೆ ಆರೋಪಿಯನ್ನು ಪತ್ತೆ ಮಾಡುವುದು ಸುಲಭವಾಯ್ತು ಎಂದು ಡಿಜಿ ಸಾವಂಗ್ ಹೇಳಿದ್ದಾರೆ.
ಆಂಧ್ರಪ್ರದೇಶ ಸಿಎಂ ವೈ.ಎಸ್. ಜಗನ್ಮೋಹನ ರೆಡ್ಡಿ ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಧನ ಘೋಷಣೆ ಮಾಡಿದ್ದಾರೆ. ಅಲ್ಲದೇ ಮೃತ ವಿದ್ಯಾರ್ಥಿನಿಯ ಕುಟುಂಬಸ್ಥರ ಅವಶ್ಯಕತೆಗಳನ್ನು ವಿಚಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಟಿಡಿಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ನಾರಾ ಲೋಕೇಶ್ ಈ ವಿಚಾರವಾಗಿ ಮಾತನಾಡಿದ್ದು, ಸಿಎಂ ಜಗನ್ಮೋಹನ ರೆಡ್ಡಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಹಿಳೆಯ ಸುರಕ್ಷತೆ ವಿಚಾರವಾಗಿ ಭಾಷಣ ಮಾಡುತ್ತಿದ್ದ ವೇಳೆ ದಲಿತ ವಿದ್ಯಾರ್ಥಿನಿಯನ್ನು ಇರಿದು ಕೊಲೆ ಮಾಡಲಾಗಿದೆ ಎಂದು ಹೇಳಿದ್ರು.
ಜನ ಸೇನಾ ನಾಯಕ ಕೆ.ಪವನ್ ಕಲ್ಯಾಣ್ ಕೂಡ ಘಟನೆ ಸಂಬಂಧ ಪ್ರತಿಕ್ರಿಯಿಸಿದ್ದು, ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಹತ್ಯೆ ದುಃಖಕರ ಘಟನೆಯಾಗಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ಇಂತಹ ದಾಳಿಗಳು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ವಿದ್ಯಾರ್ಥಿನಿಯು ಕಕನಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಯುವಕ ತನ್ನೊಟ್ಟಿಗೆ ಬರುವಂತೆ ಒತ್ತಾಯಿಸಿದ್ದ. ಇದಕ್ಕೆ ವಿದ್ಯಾರ್ಥಿನಿ ಒಪ್ಪದ ಕಾರಣಕ್ಕೆ ಆಕೆಯೊಂದಿಗೆ ವಾದಕ್ಕೆ ಇಳಿದಿದ್ದ. ಬಳಿಕ ಚಾಕುವನ್ನು ತೆಗೆದ ಯುವಕ ವಿದ್ಯಾರ್ಥಿನಿಯ ಕುತ್ತಿಗೆ ಹಾಗೂ ಹೊಟ್ಟೆಗೆ ಅನೇಕ ಬಾರಿ ಇರಿದಿದ್ದಾನೆ. ಕೂಡಲೇ ವಿದ್ಯಾರ್ಥಿನಿ ಬಳಿ ಧಾವಿಸಿದ ಸ್ಥಳೀಯರು ಆಕೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅತಿಯಾದ ರಕ್ತಸ್ರಾವದಿಂದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಳು ಎನ್ನಲಾಗಿದೆ.