2016ರ ನವೆಂಬರ್‌ನಲ್ಲಿ 500 ರೂ. ಹಾಗೂ 1000 ರೂ. ನೋಟುಗಳ ಅಪಮೌಲ್ಯೀಕರಣಗೊಂಡ ಬಳಿಕ ಹೊಸದಾಗಿ ಬಂದಿದ್ದ 2,000 ರೂ. ನೋಟಿನಲ್ಲಿ ಜಿಪಿಎಸ್ ತಂತ್ರಜ್ಞಾನಾಧರಿತ ಚಿಪ್ ಇದ್ದು, ಈ ನೋಟುಗಳನ್ನು ಎಲ್ಲೇ ಇಟ್ಟರೂ ಕಾನೂನು ಪಾಲನಾ ಪಡೆಗಳಿಗೆ ಗೊತ್ತಾಗುತ್ತದೆ ಎಂಬ ವದಂತಿಗಳು ಹಬ್ಬಿದ್ದವು.
ಈ ವದಂತಿಗಳು ಅದ್ಯಾವ ಮಟ್ಟದಲ್ಲಿ ಎಲ್ಲರನ್ನೂ ನಂಬಿಸಿದ್ದವು ಎಂದರೆ ಖುದ್ದು ಹಿರಿಯ ಪತ್ರಕರ್ತರೂ ಸಹ ಅದನ್ನು ಸತ್ಯವೆಂದು ಭಾವಿಸಿ ತಂತಮ್ಮ ಪ್ರೈಂ ಟೈಂ ಕಾರ್ಯಕ್ರಮಗಳಲ್ಲಿ ರಾಜಾರೋಷವಾಗಿ, ’ಹೊಸದಾಗಿ ಬಂದಿರುವ 2,000ರೂ. ನೋಟಿನಲ್ಲಿ ಜಿಪಿಎಸ್ ಚಿಪ್ ಇದೆ’ ಎಂದುಬಿಟ್ಟಿದ್ದರು….!
ಆದರೆ ಮುಂದಿನ ದಿನಗಳಲ್ಲಿ, ಈ ನೋಟುಗಳಲ್ಲಿ ಅಂಥಾದ್ದೇನೂ ಇಲ್ಲವೆಂದು ತಿಳಿದ ಬಳಿಕ ಇದೇ ಸುದ್ದಿ ನಿರೂಪಕರು ಹಾಗೂ ದೊಡ್ಡ ದೊಡ್ಡ ಪತ್ರಕರ್ತರು ನೆಟ್ಟಿಗರಿಂದ ಭಯಂಕರವಾಗಿ ಟ್ರೋಲ್‌ಗೀಡಾಗಿದ್ದರು.
ಇಂಥ ಪತ್ರಕರ್ತರಲ್ಲಿ ಒಬ್ಬರು ಶ್ವೇತಾ ಸಿಂಗ್. ಆಜ್ ತಕ್ ವಾಹಿನಿಯ ನಿರೂಪಕಿಯಾದ ಶ್ವೇತಾ ಸಿಂಗ್ ಏಳು ವರ್ಷಗಳ ಹಿಂದೆ ನೋಟು ಅಮಾನ್ಯೀಕರಣದ ವಿಚಾರವಾಗಿ ವರದಿ ಮಾಡುವ ವೇಳೆ, “ನಮಗೆ ತಿಳಿದ ಮೂರು ವಿಷಯಗಳಲ್ಲಿ ಒಂದು ಹೊಸ ನೋಟಿನಲ್ಲಿ ನ್ಯಾನೋತಂತ್ರಜ್ಞಾನದ ಜಿಪಿಎಸ್ ಇದೆ ಎಂಬುದು. ಒಂದೇ ಜಾಗದಲ್ಲಿ ವಿಪರೀತ ಎನ್ನುವಷ್ಟು ನೋಟುಗಳು ಶೇಖರಣೆಯಾಗಿದ್ದರೆ, ಇದರಿಂದ ಕೇವಲ ಕಾನೂನು ಪಾಲನಾ ಪಡೆಗಳಿಗೆ ಮಾತ್ರವಲ್ಲ ಆದಾಯ ತೆರಿಗೆ ಇಲಾಖೆಗೂ ಸಹ ಸಿಗ್ನಲ್ ರವಾನೆಯಾಗಲಿದೆ. ಏಕೆಂದರೆ ಈ ನೋಟುಗಳು ನೇರವಾಗಿ ಉಪಗ್ರಹಗಳಿಗೆ ಸಿಗ್ನಲ್ ರವಾನೆ ಮಾಡಲಿದ್ದು, ಇದರಿಂದ ಅಕ್ರಮವಾಗಿ ಸಂಗ್ರಹಿಸಿಡಲಾದ ನೋಟುಗಳನ್ನು ವಶಕ್ಕೆ ಪಡೆಯಬಹುದು,” ಎಂದಿದ್ದ ವಿಡಿಯೋವೊಂದು ಇತ್ತೀಚೆಗೆ ಮತ್ತೊಮ್ಮೆ ವೈರಲ್ ಆಗಿದ್ದು ಭಾರೀ ಟ್ರೋಲ್‌ಗೆ ತುತ್ತಾಗಿತ್ತು.
ಜರ್ನಲಿಸಂ ವಿದ್ಯಾರ್ಥಿಯೊಬ್ಬರು ಈ ವಿಚಾರವಾಗಿ ಶ್ವೇತಾ ಸಿಂಗ್‌ರನ್ನು ಪ್ರಶ್ನಿಸಿದಾಗ, ಸ್ಪಷ್ಟನೆ ಕೊಟ್ಟಿರುವ ಶ್ವೇತಾ ಸಿಂಗ್, “ನಾನು ಆ ರೀತಿಯಲ್ಲಿ ಹೇಳಿಯೇ ಇಲ್ಲ. ಏನಪ್ಪಾ ಅಂದ್ರೆ ನನಗೆ ಆ ರೀತಿ ವಾಟ್ಸಾಪ್ ಫಾರ್ವರ್ಡ್ ಒಂದು ಬಂದಿತ್ತು. ನಾನು ಈ ವಿಚಾರವಾಗಿ ಇದೇ ವಿಡಿಯೋದಲ್ಲಿ 45 ನಿಮಿಷಗಳ ಕಾಲ ವರದಿ ಮಾಡಿದ್ದು, ಇದರಲ್ಲಿ ಕೇವಲ 45 ಸೆಕೆಂಡ್‌ಗಳ ತುಣುಕು ಮಾತ್ರವೇ ವೈರಲ್ ಆಗಿದೆ. ನಾನು ’ಹೀಗೊಂದು ವಾಟ್ಸಾಪ್ ಫಾರ್ವರ್ಡ್ ಸುದ್ದಿಯಲ್ಲಿದೆ’ ಎಂದಷ್ಟೇ ಹೇಳಿದ್ದೆ. ಈ ವಿಚಾರವಾಗಿ ಟೀಕೆ ಮಾಡುವವರು ಒಮ್ಮೆ 45 ನಿಮಿಷಗಳ ಕಾಲ ವಿಡಿಯೋವನ್ನು ಪೂರ್ಣವಾಗಿ ವೀಕ್ಷಿಸಬೇಕು,” ಎಂದು ಸಮರ್ಥಿಸಿಕೊಂಡಿದ್ದಾರೆ.