
ಬೆಳಗಾವಿ: ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಬಿಜೆಪಿ ಕಾರ್ಯಕರ್ತರೇ ಸಭೆಯಲ್ಲಿ ಕ್ಲಾಸ್ ತೆಗೆದುಕೊಂಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದರು ಕಾರ್ಯಕರ್ತರಿಗೂ ಸಿಗುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಯತ್ತಲೂ ಸರಿಯಾಗಿ ಗಮನ ಹರಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ನೀವು ಕಾರ್ಯಕರ್ತರ ಕೈಗೆ ಸಿಕ್ಕಿಲ್ಲ. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಖಾನಾಪುರದಲ್ಲಿ ಸಂಸದರ ಕಾರ್ಯಾಲಯ ತೆರೆಯಬೇಕು. ಖಾನಾಪುರ ಜನ ಬೆಳಗಾವಿಗೆ ಹೋದರೆ ಕಾರವಾರಕ್ಕೆ ಹೋಗಿ ಅಂತಾರೆ. ಕಾರವಾರಕ್ಕೆ ಹೋದರೆ ನೀವು ಬೆಳಗಾವಿ ಜಿಲ್ಲೆಯವರು ಅಂತಾರೆ. ಖಾನಾಪುರ ಜನತೆ ನಡುವೆ ಸಿಲುಕಿ ಒದ್ದಾಡುವ ಸ್ಥಿತಿ ಇದೆ. ಕಾರ್ಯಕರ್ತರಿಗೆ ನಿಮ್ಮ ಕಡೆಯಿಂದ ಸ್ಪಂದನೆ ಸಿಗುತ್ತಿಲ್ಲ. ಈ ಬಗ್ಗೆ ಸ್ಪಷ್ಟ ನಿಲುವು ಕೈಗೊಳ್ಳುವಂತೆ ಸೂಚಿಸಿದ್ದಾರೆ.