ಬೆಂಗಳೂರು: ನೂತನ ವಿಜಯನಗರ ಜಿಲ್ಲೆಗೆ 371 ಜೆ ಸ್ಥಾನಮಾನ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಗೆ ವಿಜಯನಗರ ಜಿಲ್ಲೆಯನ್ನು ಸೇರ್ಪಡೆ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಬಳ್ಳಾರಿ ಜಿಲ್ಲೆಯೂ ಸೇರಿತ್ತು. ಹೊಸದಾಗಿ ವಿಜಯನಗರ ಜಿಲ್ಲೆ ರಚನೆಯಾದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯನ್ನು ಕೂಡ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವ್ಯಾಪ್ತಿಗೆ ಸೇರ್ಪಡೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.
ಇದರಿಂದಾಗಿ ಸಂವಿಧಾನದ ಅನುಚ್ಛೇದ 371 ಜೆ ವಿಶೇಷ ಸ್ಥಾನಮಾನದ ಸೌಲಭ್ಯಗಳು ವಿಜಯನಗರ ಜಿಲ್ಲೆಗೆ ಸಿಗಲಿವೆ. ಕಲ್ಯಾಣ ಕರ್ನಾಟಕ ವಿಶೇಷ ಸ್ಥಾನಮಾನದಡಿ ನೀಡಲಾಗುವ ಎಲ್ಲಾ ಸೌಲಭ್ಯಗಳು ವಿಜಯನಗರ ಜಿಲ್ಲೆಗೂ ಮುಂದುವರೆಯಲಿದೆ ಎಂದು ಹೇಳಲಾಗಿದೆ.
ಈ ಭಾಗದ ಜನರ ಬಹುದಿನದ ಕನಸು ಸಾಕಾರಗೊಂಡಿದ್ದು, 371 ಜೆ ಗೆ ಸೇರ್ಪಡೆ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಇದಕ್ಕೆ ಕಾರಣರಾದ ಎಲ್ಲರಿಗೂ, ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಸಚಿವ ಆನಂದ ಸಿಂಗ್ ಕೃತಜ್ಞತೆ ಸಲ್ಲಿಸಿದ್ದಾರೆ.