ಬೊಮ್ಮಾಯಿ ಸಂಪುಟದಲ್ಲಿ ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಆನಂದ್ ಸಿಂಗ್ ಇದೀಗ ಬಹಿರಂಗವಾಗಿ ರಾಜಕೀಯ ನಿವೃತ್ತಿ ವಿಚಾರವಾಗಿ ಮಾತನಾಡಿದ್ದಾರೆ. ಹೊಸಪೇಟೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ನನ್ನ ರಾಜಕೀಯ ಜೀವನದ ಆರಂಭ ಹಾಗೂ ಅಂತ್ಯ ದೇವರಿಗೆ ಬಿಟ್ಟಿದ್ದು ಎಂದಿದ್ದಾರೆ.
ಹೊಸಪೇಟೆಯ ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ಭೇಟಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನ ಆರಂಭವಾಗಿದ್ದು ಇದೇ ದೇಗುಲದಿಂದ. ಇದೀಗ ನನ್ನ ರಾಜಕೀಯ ಜೀವನ ಅಂತ್ಯ ಕೂಡ ಇಲ್ಲೇ ಆಗಬಹುದೇನೋ. ನನ್ನ ರಾಜಕೀಯ ಜೀವನ ಅಂತ್ಯ ಹಾಗೂ ಪುನಾರಂಭ ಆ ಕೃಷ್ಣನ ಕೈಯಲ್ಲಿ ಇದೆ. ನಾನು ತಪ್ಪು ಮಾಡಿದ್ದರೆ ಆ ದೇವರು ನನಗೆ ಶಿಕ್ಷೆ ಕೊಡಲಿ ಎಂದು ಹೇಳಿದ್ರು.
ನಾನು ದೊಡ್ಡ ರಾಜಕಾರಣಿಯಲ್ಲ. ಆದರೆ ನನ್ನ ಪ್ರಾಮಾಣಿಕತೆ, ನಿಷ್ಟೆ ಹಾಗೂ ಜನರ ಆಶೀರ್ವಾದದ ಮೂಲಕ ನಾಲ್ಕು ಬಾರಿ ಶಾಸಕನಾಗಿದ್ದೇನೆ. ಯಡಿಯೂರಪ್ಪ ಇದ್ದಿದ್ದರೆ ಇಂದು ಈ ರೀತಿ ಆಗುತ್ತಲೇ ಇರಲಿಲ್ಲ. ನನ್ನ ನಿರ್ಧಾರ ಏನು ಅನ್ನೋದನ್ನ ಸಿಎಂಗೆ ಈಗಾಗಲೇ ತಿಳಿಸಿದ್ದೇನೆ. ಅದನ್ನ ನಾನಿಲ್ಲಿ ಬಹಿರಂಗ ಮಾಡಲಾರೆ. ನಾನು ಯಾವುದೇ ಕಾರಣಕ್ಕೂ ಬ್ಲಾಕ್ಮೇಲ್ ತಂತ್ರಕ್ಕೆ ಮೊರೆ ಹೋಗುವವನಲ್ಲ. ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಾನು ಎಂದಿಗೂ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ವರ್ತಿಸೋದಿಲ್ಲ ಎಂದು ಹೇಳಿದ್ರು.