ಜನಪ್ರಿಯವಾಗಿ ‘ಆಟೋ ಅಣ್ಣಾ’ ಎಂದು ಕರೆಯಲ್ಪಡುವ ಅಣ್ಣಾ ದೊರೈ (37) ನೀವು ಆಟೋ ರಿಕ್ಷಾವೊಂದನ್ನು ಊಹಿಸಲೂ ಸಾಧ್ಯವಿಲ್ಲದಂತಹ ಆಟೋ ರಿಕ್ಷಾವನ್ನು ಹೊಂದಿದ್ದಾರೆ.
ಚೆನ್ನೈ ಮೂಲದ ಆಟೋ ಚಾಲಕ ಅಣ್ಣಾ ದೊರೈ, ಜನದಟ್ಟಣೆಯ ಒಎಂಆರ್ ಪ್ರದೇಶದಲ್ಲಿ ಎಲ್ಲರಿಗೂ ಗೊತ್ತಿರುವ ವ್ಯಕ್ತಿ. ಅಣ್ಣಾ ದೊರೈ ಅವರ ವಿಶೇಷತೆ ಎಂದರೆ ಒಂದೇ ರೈಡ್‌ನಲ್ಲಿ ಗ್ರಾಹಕರ ಮನಸ್ಸನ್ನು ಸೂರೆಗೊಂಡಿದ್ದು, ಅಣ್ಣಾ ದೊರೈ ಅವರ ಆಟೋದಲ್ಲಿ ಒಮ್ಮೆ ಪ್ರಯಾಣಿಸಿದವರು ಮುಂದಿನ ಬಾರಿ ಪ್ರಯಾಣಿಸಲು ಖಂಡಿತವಾಗಿ ಕಾಯುತ್ತಾರೆ.
ಕೇವಲ ಒಂದೂವರೆ ರೂಪಾಯಿಗೆ ಉಪಹಾರ ನೀಡ್ತಾರೆ ಈ ವೃದ್ದ ದಂಪತಿ
ದೊರೈ ಅವರು ಇಚ್ಛೆಯಿಂದ ಆಟೋ-ರಿಕ್ಷಾವನ್ನು ಓಡಿಸಲು ಬರಲಿಲ್ಲವಾದರೂ, ಅವರು ತಮ್ಮ ಕೆಲಸವನ್ನು ಪ್ರೀತಿಸುವಂತೆ ವಿಶಿಷ್ಟ ಶೈಲಿಯಲ್ಲಿ ಬದಲಾಯಿಸಿಕೊಂಡರು. ಈ “ಆಟೋ ಅಣ್ಣನ” ವಾಹನವು ಲ್ಯಾಪ್‌ಟಾಪ್, ಐಪ್ಯಾಡ್, ಮಿನಿ-ಫ್ರಿಡ್ಜ್, ಉಚಿತ ವೈ-ಫೈ, ಉಚಿತ ತಿಂಡಿ, ಉಚಿತ ಚಾಕೊಲೇಟ್‌ಗಳು, ವಾರ್ತಾಪತ್ರಿಕೆಗಳು, ವಾರಪತ್ರಿಕೆಗಳು, ಮಿನಿ ಟಿವಿ, ಫೇಸ್‌ಮಾಸ್ಕ್‌ಗಳು ಮತ್ತು ಸ್ಯಾನಿಟೈಸರ್- ಈ ಎಲ್ಲಾ ಸೌಲಭ್ಯಗಳನ್ನು ಗ್ರಾಹಕರಿಗಾಗಿ ಒಳಗೊಂಡಿದೆ. ಹಲವು ವೈಶಿಷ್ಟ್ಯಗಳನ್ನು ಒದಗಿಸುವ ದೊರೈ ಅವರ ಆಟೋದಲ್ಲಿ ಪ್ರಯಾಣಿಸಲು ಸರ್ಕಾರದ ಮಾರ್ಗಸೂಚಿಗಳ ಅಡಿಯಲ್ಲಿ ಇತರ ಆಟೋಗಳಿಗೆ ವಿಧಿಸುವ ದರದಂತೆಯೇ ಖರ್ಚಾಗುತ್ತದೆ.
ಏತನ್ಮಧ್ಯೆ, ಈ ಸೇವೆಗಳನ್ನು ಒದಗಿಸುವ ಮೊದಲು, ಗ್ರಾಹಕರಿಗಾಗಿ ದೀರ್ಘಕಾಲ ಕಾಯಬೇಕಾಗಿತ್ತು ಮತ್ತು ಈಗ ಗ್ರಾಹಕರು ತನಗಾಗಿ ಕಾಯುತ್ತಿದ್ದಾರೆ ಎಂದು ದೊರೈ ಹೆಮ್ಮೆಯಿಂದ ಹೇಳುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಬೋಧನೆಯು ವಿಶ್ವದ ಅತ್ಯಂತ ಜವಾಬ್ದಾರಿಯುತ ಕೆಲಸ ಎಂದು ಭಾವಿಸುವ ದೊರೈ ಶಿಕ್ಷಕರಿಗೆ ತನ್ನ ಆಟೋದಲ್ಲಿ ಸವಾರಿ ಮಾಡಲು ಯಾವುದೇ ಶುಲ್ಕ ವಿಧಿಸುವುದಿಲ್ಲ.
ಕೋವಿಡ್ -19 ಸಂದರ್ಭದಲ್ಲಿ ವೈದ್ಯರು, ದಾದಿಯರು ಮತ್ತು ನೈರ್ಮಲ್ಯ ಕಾರ್ಯಕರ್ತರಿಗೆ ಪ್ರಯಾಣವನ್ನು ನಿಶ್ಶುಲ್ಕವಾಗಿ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಅಣ್ಣಾ ದೊರೈ. ಇವರ ಇಂಥ ಕೈಂಕರ್ಯಗಳ ಪಟ್ಟಿ ಮುಂದುವರಿಯುತ್ತದೆ. ಅಣ್ಣಾ ದೊರೈ ತಮ್ಮ ಆಟೋ ರಿಕ್ಷಾದಲ್ಲಿ ತಾಯಂದಿರ ದಿನ, ಮಕ್ಕಳ ದಿನ ಮತ್ತು ಮಹಿಳಾ ದಿನದಂದು ರಿಯಾಯಿತಿ ದರದಲ್ಲಿ ಸವಾರಿ ಮಾಡುವಂತಹ ಅನೇಕ ಅಚ್ಚರಿ ಪ್ಲಾನ್‌ಗಳನ್ನು ಕೊಡಮಾಡುತ್ತಾ ಬಂದಿದ್ದಾರೆ.
12ನೇ ತರಗತಿಗೆ ವಿದ್ಯಾಭ್ಯಾಸ ಮುಗಿಸಬೇಕಾಗಿ ಬಂದ 37 ವರ್ಷದ ದೊರೈ, ವಿಶ್ವಾಸಾರ್ಹತೆಯ ಮೂಲಕ ವ್ಯವಹಾರದಲ್ಲಿ ಗ್ರಾಹಕರನ್ನು ಹೇಗೆ ಸೆಳೆಯುವುದು ಮತ್ತು ಗ್ರಾಹಕರನ್ನು ತನ್ನ ಬಳಿಗೆ ಹೇಗೆ ಕರೆತರುವುದು ಎಂಬುದನ್ನು ತೋರಿದ್ದಾರೆ.
ಅವರ ಈ ಜನಪ್ರಿಯತೆಯು, ಗ್ರಾಹಕರ ಮನ ಗೆಲ್ಲುವುದು ಹೇಗೆ ಎಂಬ ಕುರಿತು ಭಾರತದಾದ್ಯಂತ ವಿವಿಧ ವೇದಿಕೆಗಳಲ್ಲಿ ಮಾತನಾಡಲು ದೊರೈ ಅವರಿಗೆ ಅವಕಾಶ ಸಿಕ್ಕಿದೆ. ಇದಲ್ಲದೇ, ದೊರೈ ಅವರು ಮೈಕ್ರೋಸಾಫ್ಟ್, ಗೂಗಲ್ ಮತ್ತು ಎಚ್‌ಪಿಯಂತಹ ಟೆಕ್ ಲೋಕದ ಪ್ರಮುಖ ಕಂಪನಿಗಳು ಸೇರಿದಂತೆ 300 ಕ್ಕೂ ಹೆಚ್ಚು ಕಂಪನಿಗಳಲ್ಲಿ ಸೆಮಿನಾರ್‌ಗಳಲ್ಲಿ ತಮ್ಮ ಆಲೋಚನೆಗಳನ್ನು ಪ್ರಸ್ತುತಪಡಿಸಿದ್ದಾರೆ.
ಮಹೀಂದ್ರಾ ಸಮೂಹದ ಚೇರ್ಮನ್ ಆನಂದ್ ಮಹೀಂದ್ರ ಅವರು ದೊರೈ ಅವರ ಬಗ್ಗೆ ವಿಡಿಯೊವನ್ನು ನೋಡಿ, ಅವರನ್ನು ಹಾಡಿ ಹೊಗಳಿದ್ದಾರೆ. “ನಾವು ಅಣ್ಣಾ ದೊರೈ ಅವರಿಂದ ಬಹಳಷ್ಟು ಕಲಿಯಬೇಕಾಗಿದೆ. ಎಂಬಿಎ ವಿದ್ಯಾರ್ಥಿಗಳು ಅವರೊಂದಿಗೆ ಒಂದು ದಿನ ಕಳೆದರೆ, ಅದು ಗ್ರಾಹಕ ಅನುಭವ ನಿರ್ವಹಣೆಯಲ್ಲಿ ಒಂದು ಕೋರ್ಸ್ ಪಡೆದಂತೆ. ಈ ವ್ಯಕ್ತಿ ಆಟೋ ಡ್ರೈವರ್ ಮಾತ್ರವಲ್ಲ, ಮ್ಯಾನೇಜ್‌ಮೆಂಟ್ ಪ್ರೊಫೆಸರ್,” ಎಂದಿದ್ದಾರೆ.
ಏತನ್ಮಧ್ಯೆ, ಈ ವಾರದ ಆರಂಭದಲ್ಲಿ, ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಅವರು ನಗರದಲ್ಲಿ ಅಣ್ಣಾರ ವಿಶಿಷ್ಟ ಸೇವೆಗಾಗಿ ಅವರನ್ನು ಶ್ಲಾಘಿಸಿದ್ದಾರೆ.