ಟೋಕಿಯೋ ಪ್ಯಾರಾ ಒಲಿಂಪಿಕ್ನಲ್ಲಿ ಭಾರತದ ಪ್ಯಾರಾ ಶೂಟರ್ ಅವನಿ ಲೇಖಾರಾ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಪ್ಯಾರಾ ಒಲಿಂಪಿಕ್ನಲ್ಲಿ ಸ್ವರ್ಣ ಪದಕ ಬಾಚಿದ ದೇಶದ ಮೊದಲ ಮಹಿಳೆ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಮಹಿಳೆಯರ 10 ಎಎಂ ರೈಫಲ್ ಸ್ಟ್ಯಾಂಡಿಂಗ್ ವಿಭಾಗದಲ್ಲಿ ಅವನಿ ಈ ಸಾಧನೆಗೈದಿದ್ದಾರೆ. ಅವನಿಯ ಸಾಧನೆಗೆ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದ್ದು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ವಿಶೇಷ ಬಹುಮಾನ ಘೋಷಿಸಿದ್ದಾರೆ.
ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ ಅವನಿ ಲೇಖಾರಾಗೆ ಮೊದಲ ಕಸ್ಟಮೈಸಡ್ ಎಸ್ಯುವಿ ನೀಡೋದಾಗಿ ಟ್ವಿಟರ್ನಲ್ಲಿ ಘೋಷಣೆ ಮಾಡಿದ್ದಾರೆ. ಈ ರೀತಿಯ ವಾಹನವನ್ನು ನಿರ್ಮಾಣ ಮಾಡುವ ಪರಿಕಲ್ಪನೆಯನ್ನು ಭಾರತದ ಪ್ಯಾರಾಲಿಂಪಿಕ್ ಕಮಿಟಿಯ ಅಧ್ಯಕ್ಷೆ ದೀಪಾ ಮಲಿಕ್ ನೀಡಿದ್ದಾರೆ ಎಂದು ಹೇಳಿದ್ದಾರೆ.
ಈ ವಿಶೇಷ ಕಾರು ದಿವ್ಯಾಂಗರು ಕೂಡ ಅನಾಯಾಸವಾಗಿ ರಸ್ತೆಯಲ್ಲಿ ಡ್ರೈವ್ ಮಾಡಿಕೊಂಡು ಹೋಗುವ ರೀತಿಯಲ್ಲಿ ನಿರ್ಮಾಣವಾಗಿದೆ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.
ವಾರಗಳ ಹಿಂದಷ್ಟೇ, ದೀಪಾ ಮಲಿಕ್ ದಿವ್ಯಾಂಗರಿಗೆ ಎಸ್ಯುವಿ ನಿರ್ಮಾಣ ಮಾಡುವಂತೆ ಸಲಹೆ ನೀಡಿದ್ದರು. ಇದಾದ ಬಳಿಕ ನಾನು ನನ್ನ ಸಹೋದ್ಯೋಗಿ ವೇಲುಗೆ ಈ ಬಗ್ಗೆ ಮನವಿ ಮಾಡಿದೆ. ಅವರು ಈ ಸವಾಲನ್ನು ಸ್ವೀಕರಿಸಿದ್ರು. ನೀವು ನಿರ್ಮಾಣ ಮಾಡಿದ ಈ ವಿಶೇಷ ಎಸ್ಯುವಿ ಮೊದಲ ಉತ್ಪನ್ನವು ಅವನಿ ಅವರಿಗೆ ಸಿಗಲಿದೆ ಎಂದು ಆನಂದ್ ಮಹೀಂದ್ರಾ ಟ್ವೀಟಾಯಿಸಿದ್ದಾರೆ.