ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಆಸಕ್ತಿದಾಯಕ ವಿಡಿಯೋಗಳು ಮತ್ತು ಚಿಂತನಶೀಲ ಪೋಸ್ಟ್‌ಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಅವರ ಪ್ರೇರಕ ಪೋಸ್ಟ್‌ಗಳಿಗಾಗಿ ಅಭಿಮಾನಿಗಳು ಮತ್ತು ಅನುಯಾಯಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇದೀಗ ಹಂಚಿಕೊಂಡಿರುವ ವಿಡಿಯೋ ಖಂಡಿತಾ ನಿಮ್ಮನ್ನು ನಗಿಸದೆ ಇರದು.
ಹೌದು, ಸಾಮಾನ್ಯವಾಗಿ ಮಳೆಗಾಲದಲ್ಲಿ ನೀವು ರಸ್ತೆಯಲ್ಲಿ ನಡೆಯುತ್ತಾ ಸಾಗುತ್ತೀರಿ ಎಂದಿಟ್ಟುಕೊಳ್ಳೋಣ. ಈ ವೇಳೆ ರಸ್ತೆ ತುಂಬಾ ನೀರಿದ್ದು, ಎದುರಿನಿಂದ ವಾಹನ ಬಂದರೆ ಏನು ಮಾಡುತ್ತೀರಿ? ಅಯ್ಯೋ……. ವಾಹನ ಸ್ಪೀಡಾಗಿ ಬಂದು ಆ ನೀರನ್ನು ತನ್ನ ಮೇಲೆ ಎರಚುತ್ತೆ ಎಂದು ಬೇಗ ಮುಂದೆ ಸಾಗುತ್ತೀರಿ ಅಲ್ವಾ? ಆದರೆ, ಉದ್ಯಮಿ ಆನಂದ್ ಮಹೀಂದ್ರಾ ಅವರು ಇಂಥದ್ದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ, ದೃಷ್ಟಿಕೋನ ಮಾತ್ರ ವಿಭಿನ್ನವಾಗಿದೆ.
ಕಪ್ಪು ಶಾರ್ಟ್ಸ್ ಧರಿಸಿದ ಇಬ್ಬರು ವ್ಯಕ್ತಿಗಳು ಮತ್ತು ಒಬ್ಬ ಯುವತಿ ನೀರು ತುಂಬಿದ ರಸ್ತೆಬದಿಯಲ್ಲಿ ನಿಂತಿದ್ದಾರೆ. ರಸ್ತೆಯಲ್ಲಿ ಸಾಗಿ ಬರುತ್ತಿರುವ ಕಾರು ಚಾಲಕರ ಬಳಿ ತಮಗೆ ನೀರನ್ನು ಎರಚುವಂತೆ ದೂರದಿಂದಲೇ ಒತ್ತಾಯಿಸಿದ್ದಾರೆ. ಕಾರು ಚಾಲಕರು ಕೂಡ ವೇಗದಿಂದ ಬಂದು ತಮ್ಮ ವಾಹನದ ಮುಖೇನ ನೀರನ್ನು ಅವರ ಮೈಗೆ ಎರಚಿ ಮುಂದೆ ಸಾಗಿದ್ದಾರೆ. ಕಾರುಗಳು ನೀರು ಎರಚಿದಾಗ ಅವರ ಮುಖದಲ್ಲಿ ಸಂಭ್ರಮ, ಸಂತಸ ಎದ್ದು ಕಾಣುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಪ್ರತಿಕೂಲ ಮತ್ತು ಅವಕಾಶ ಒಂದೇ ನಾಣ್ಯದ ಎರಡು ಮುಖಗಳು. ಅವೆರಡೂ ಜೀವನದ ಅನಿವಾರ್ಯ ಭಾಗಗಳು. ಆದರೆ, ನಾವು ಅವುಗಳನ್ನು ನೋಡಲು ಹೇಗೆ ಆರಿಸಿಕೊಳ್ಳುತ್ತೇವೆ ಎಂಬುದು ಎಲ್ಲಾ ವ್ಯತ್ಯಾಸಗಳನ್ನು ಮಾಡಬಹುದು ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.