ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಆಗಾಗ್ಗೆ ಕೆಲವು ಆಸಕ್ತಿದಾಯಕ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಅವರು ಈಚೆಗೆ ಪೋಸ್ಟ್ ಮಾಡಿರುವ ಸೈಕಲ್ ಆಟೋ ರಿಕ್ಷಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಹಲವರ ಕುತೂಹಲ ಕೆರಳಿಸಿದೆ.
ಆರು ಆಸನಗಳ ಸೈಕಲ್ ಆಟೋ-ರಿಕ್ಷಾ ಇದಾಗಿದೆ. ಇಂಥದ್ದೊಂದು ಕನಸಿನ ರಿಕ್ಷಾ ನಿರ್ಮಿಸುವಲ್ಲಿ ಯಶಸ್ವಿಯಾದ ಗ್ರಾಮೀಣ ಭಾರತದ ಯುವಕನ ವಿಡಿಯೋ ಆನಂದ್ ಮಹೀಂದ್ರಾ ಶೇರ್ ಮಾಡಿಕೊಂಡಿದ್ದು, ಆತನನ್ನು ಶ್ಲಾಘಿಸಿದ್ದಾರೆ.
ಇದು ವಿದ್ಯುತ್‌ನಿಂದ ಚಲಿಸುತ್ತದೆ ಮತ್ತು ಒಂದೇ ಚಾರ್ಜ್‌ನಿಂದ 150 ಕಿಮೀ ವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ವಿಡಿಯೋದಲ್ಲಿರುವ ವ್ಯಕ್ತಿ ಹೇಳಿಕೊಂಡಿದ್ದಾನೆ. ಈ ವಾಹನವನ್ನು ನಿರ್ಮಿಸಲು ಬಳಸಲಾದ ಮೊತ್ತ 10 ಸಾವಿರದಿಂದ 12 ಸಾವಿರ ರೂಪಾಯಿ ಮಾತ್ರ. ಕೇವಲ 10 ರೂ.ಗೆ ವಾಹನವನ್ನು ಚಾರ್ಜ್ ಮಾಡಬಹುದು ಎಂದು ವ್ಯಕ್ತಿ ವಿಡಿಯೋದಲ್ಲಿ ಹೇಳಿದ್ದಾನೆ.
ಈ ವ್ಯಕ್ತಿಯ ಆವಿಷ್ಕಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಆನಂದ್ ಮಹೀಂದ್ರಾ ಅವರು, ಗ್ರಾಮೀಣ ಸಾರಿಗೆ ಆವಿಷ್ಕಾರಗಳಿಂದ ನಾನು ಯಾವಾಗಲೂ ಪ್ರಭಾವಿತನಾಗಿದ್ದೇನೆ, ಅಲ್ಲಿ ಅವಶ್ಯಕತೆಯು ಆವಿಷ್ಕಾರದ ತಾಯಿಯಾಗಿದೆ ಎಂದಿದ್ದು, ನೆಟ್ಟಿಗರು ಕೂಡ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.