ಅಖಿಲ ಭಾರತೀಯ ಅಖಾಡ ಪರಿಷತ್ನ ಮುಖ್ಯಸ್ಥರಾಗಿದ್ದ ಮಹಾಂತ್ ನರೇಂದ್ರ ಗಿರಿ ಅವರ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಿಷ್ಯ ಆನಂದ ಗಿರಿ ತಮಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಜೈಲಿನ ಒಳಗಡೆ ತಮಗೆ ಭದ್ರತೆ ನೀಡುವಂತೆ ಕೇಳಿಕೊಂಡಿದ್ದಾರೆ.
ಆನಂದಗಿರಿ ಮನವಿಯನ್ನು ಆಲಿಸಿದ ಪ್ರಯಾಗ್ರಾಜ್ನ ಸಿಜೆಎಂ ನೈನಿ ಕೇಂದ್ರ ಕಾರಾಗೃಹ ಅಧೀಕ್ಷಕರ ಬಳಿ ಆನಂದ ಗಿರಿಗೆ ಜೈಲಿನ ಮಾರ್ಗಸೂಚಿಯ ಪ್ರಕಾರ ಸೂಕ್ತ ಭದ್ರತೆ ನೀಡುವಂತೆ ಸೂಚನೆ ನೀಡಿದ್ದಾರೆ.
ಜೈಲಿನ ಒಳಗೆ ತಮಗೆ ಬೆದರಿಕೆ ಇರುವ ಬಗ್ಗೆ ಜಿಲ್ಲಾ ನ್ಯಾಯಾಲಯಕ್ಕೆ ನಿನ್ನೆ ಆನಂದಗಿರಿ ಭದ್ರತೆ ಕೋರಿ ಅರ್ಜಿ ಸಲ್ಲಿಸಿದ್ದರು. ಸಿಜೆಐಎಂ ಹರೇಂದ್ರ ನಾಥ್ ಇನ್ಮುಂದೆ ಆನಂದಗಿರಿ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಅಖಿಲ ಭಾರತೀಯ ಅಖಾಡ ಪರಿಷತ್ನ ಮುಖ್ಯಸ್ಥರಾಗಿದ್ದ ಮಹಾಂತ್ ನರೇಂದ್ರ ಗಿರಿಯವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನರೇಂದ್ರ ಗಿರಿ ಮೃತದೇಹದ ಸಮೀಪ ಡೆತ್ನೋಟ್ ದೊರಕಿದ್ದು ಇದರಲ್ಲಿ ಅವರು ಶಿಷ್ಯ ವಿಷಯಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದರು. ಪತ್ರದಲ್ಲಿ ಇರುವ ಮಾಹಿತಿಯ ಅನುಸಾರ ಪೊಲೀಸರು ಶಿಷ್ಯ ಆನಂದಗಿರಿಯನ್ನು ವಶಕ್ಕೆ ಪಡೆದಿದ್ದರು.