ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆದಿದ್ದ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟು ಹಬ್ಬದ ‘ಅಮೃತ ಮಹೋತ್ಸವ’ ಕಾರ್ಯಕ್ರಮಕ್ಕೆ ಕಲಬುರಗಿ ಜಿಲ್ಲೆಯಿಂದ ಆಗಮಿಸಿದ್ದ ವೃದ್ಧರೊಬ್ಬರು ಈವರೆಗೆ ನಾಪತ್ತೆಯಾಗಿದ್ದು, ಅವರ ಮಕ್ಕಳು ಹುಡುಕಾಟ ನಡೆಸಿದ್ದಾರೆ.
ಕಲಬುರಗಿ ಜಿಲ್ಲೆ ಸಾವಳಗಿ ಬಿ ಗ್ರಾಮದ 65 ವರ್ಷದ ವೃದ್ಧ ಬಸಣ್ಣ ಮಲ್ಲಪ್ಪ ಗೋಳೆ ನಾಪತ್ತೆಯಾಗಿರುವರಾಗಿದ್ದು, ಇವರು ಆಗಸ್ಟ್ 2ರಂದು ಕಲಬುರಗಿ ನಗರಕ್ಕೆ ಬಂದು ಸಮಾವೇಶಕ್ಕೆ ಹೋಗಲು ಬಸ್ ಏರಿದ್ದರು. ಇವರನ್ನು ಕರೆದುಕೊಂಡು ಹೋಗುತ್ತಿದ್ದವರು ಮತ್ತೊಂದು ಬಸ್ಸಿನಲ್ಲಿದ್ದು, ಸಮಾವೇಶ ಮುಗಿದ ಬಳಿಕ ಬಸಣ್ಣ ಕಾಣಿಸದಿದ್ದಾಗ ಮತ್ತೊಂದು ಬಸ್ ನಲ್ಲಿ ಇರಬಹುದು ಎಂದು ವಾಪಾಸ್ ಆಗಿದ್ದಾರೆ.
ಆದರೆ ಸಮಾವೇಶಕ್ಕೆ ಹೋದ ಎಲ್ಲರೂ ವಾಪಸ್ ಬಂದರೂ ಸಹ ತಮ್ಮ ತಂದೆ ಬಾರದಿರುವುದರಿಂದ ಗಾಬರಿಗೊಂಡ ಅವರ ಪುತ್ರರು ದಾವಣಗೆರೆಗೆ ತೆರಳಿ ಸಮಾವೇಶ ನಡೆದ ಸ್ಥಳ, ಅಕ್ಕಪಕ್ಕದ ಹೋಟೆಲ್ ಗಳು, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಎಲ್ಲೆಡೆ ಹುಡುಕಿದರೂ ಸಿಕ್ಕಿಲ್ಲ. ಇದೀಗ ಕಲಬುರಗಿ ಗ್ರಾಮಾಂತರ ಠಾಣೆಗೆ ಅವರ ಪುತ್ರರು ದೂರು ನೀಡಿದ್ದಾರೆ.