ಪ್ಲಾಸ್ಟಿಕ್ ಗಳನ್ನು ಜನರು ಎಲ್ಲೆಂದರಲ್ಲಿ ಬಿಸಾಕುತ್ತಾರೆ. ಆದರೆ, ಇಲ್ಲೊಬ್ಬಳು ಪ್ಲಾಸ್ಟಿಕ್ ಮರುಬಳಕೆ ಮಾಡಿ ಅದರಿಂದ ಸುಂದರವಾದ ಅಲಂಕಾರಿಕ ಹೂವುಗಳನ್ನು ತಯಾರಿಸಿದ್ದಾಳೆ. ತನ್ನ ಮನೆಯ ಹೊರಭಾಗವನ್ನು ಮರುಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ ಹೂವುಗಳಿಂದ ಅಲಂಕರಿಸಿದ್ದಾಳೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗಿದೆ.
ನೋಡಲು ನೈಜವಾದಂತೆ ಕಂಡರೂ, ಅವು ಪ್ಲಾಸ್ಟಿಕ್ನಿಂದ ಮಾಡಲ್ಪಟ್ಟಿದೆ. ಮನೆಯ ಮೊದಲ ಮಹಡಿಯ ಕಿಟಕಿಯಿಂದ 12 ಅಡಿ ಕೆಳಗಿನವರೆಗೂ ಪ್ಲಾಸ್ಟಿಕ್ ಹೂವುಗಳನ್ನು ಬಹಳ ಸುಂದರವಾಗಿ ಅಲಂಕರಿಸಿದ್ದಾಳೆ.
53 ವರ್ಷದ ಫಿಯೋನಾ ಎಂಬ ಮಹಿಳೆಯೇ ಈ ಸುಂದರವಾದ ಹೂವಿನ ಅಲಂಕಾರವನ್ನು ಮಾಡಿದಾಕೆ. ಕಳೆದ ಕ್ರಿಸ್ಮಸ್ನಲ್ಲಿ ತನ್ನ ಸ್ನೇಹಿತರು ಮತ್ತು ನೆರೆಹೊರೆಯವರಿಂದ ಹೂವುಗಳಿಗಾಗಿ ಬಾಟಲಿಗಳನ್ನು ಸಂಗ್ರಹಿಸಿದಳಂತೆ. ನಂತರ ಬಾಟಲಿಗಳಿಗೆ ಹೂವಿನ ಆಕಾರವನ್ನು ನೀಡಿದ್ದಾಳೆ.
2014ರ ಲಂಡನ್ ಟವರ್ನಲ್ಲಿನ ವೇವ್ ಡಿಸ್ಪ್ಲೇಯಿಂದ ಈ ಅಲಂಕಾರವನ್ನು ಮಾಡಲು ತಾನು ಸ್ಫೂರ್ತಿ ಪಡೆದಿದ್ದಾಗಿ ಫಿಯೋನಾ ಹೇಳಿದ್ದಾರೆ. ಸುಮಾರು 1,000 ಬಾಟಲಿಗಳನ್ನು ಹೂವಿನಂತೆ ಮಾರ್ಪಾಡು ಮಾಡಿ, ಅದನ್ನು ತಂತಿಯ ಸಹಾಯದಿಂದ ಮನೆಯ ಮಹಡಿಯಿಂದ ನೆಲದವರೆಗೂ ಅಲಂಕರಿಸಿದ್ದಾಳೆ. ಫಿಯೋನಾಳ ಮನೆಯ ಹೂವಿನ ಅಲಂಕಾರ ನೋಡಿ ಜನರು ನಿಬ್ಬೆರಗಾಗಿದ್ದಾರೆ. ಅಲ್ಲದೆ ಈಕೆಗೆ ಅಪಾರ ಪ್ರಮಾಣದ ದೇಣಿಗೆಯೂ ಹರಿದು ಬರುತ್ತಿದೆಯಂತೆ.