ಬೆಂಗಳೂರು : ಶಾಲೆ ತೊರೆಯುವ ಮಕ್ಕಳ ಮೇಲೆ ನಿಗಾ ವಹಿಸಲು ಶಿಕ್ಷಣ ಇಲಾಖೆ ಹೊಸ ನಿಯಮ ರೂಪಿಸಿದ್ದು, ಒಂದು ಶಾಲೆಯಲ್ಲಿ ಶಿಕ್ಷಣ ಪೂರೈಸುವ ವಿದ್ಯಾರ್ಥಿಗಳು ಮುಂದೆ ಯಾವ ಶಾಲೆಗೆ ದಾಖಲಾಗುತ್ತಾರೆ ಎನ್ನುವ ಮಾಹಿತಿ ಸಂಗ್ರಹದ ಹೊಣೆಗಾರಿಕೆಯನ್ನು ಮುಖ್ಯ ಶಿಕ್ಷಕರಿಗೆ ವಹಿಸಿದೆ.
ಈ ಬಾರಿ ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಶಾಲಾ ಆರಂಭದ ಅವಧಿಯಲ್ಲೇ ನಿಖರವಾಗಿ ಗುರುತಿಸಿ ಪತ್ತೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಪ್ರತಿ ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಶಾಲೆಯಲ್ಲಿ ಶಿಕ್ಷಣ ಪೂರೈಸಿದ ನಂತರ ಮುಂದಿನ ಹಂತಕ್ಕೆ ಬೇರೆ ತರಗತಿಗಳಿಗೆ ಹೋಗುವ ಮಕ್ಕಳು ಯಾವ ಶಾಲೆಯಲ್ಲಿ ದಾಖಲಾತಿ ಪಡೆದಿದ್ದಾರೆ ಎಂಬ ಖಚಿತ ಮಾಹಿತಿ ಸಂಗ್ರಹಿಸುವುದು ಕಡ್ಡಾಯಗೊಳಿಸಲಾಗಿದೆ.
ಒಂದು ಶಾಲೆ ತೊರೆದು ಮತ್ತೊಂದು ಶಾಲೆಗೆ ಸೇರುವ ಮಕ್ಕಳು, ಒಂದು ಹಂತ ಪೂರೈಸಿ ಮತ್ತೊಂದು ಹಂತಕ್ಕೆ ಸಾಗುವ ಮಕ್ಕಳಿಗೆ ಇದುವರೆಗೂ ವರ್ಗಾವಣೆ ಪತ್ರವನ್ನು ಭೌತಿಕವಾಗಿ ನೀಡಲಾಗುತ್ತಿತ್ತು. ಇದರಿಂದ ಶಾಲೆ ತೊರೆಯುವ ಮಕ್ಕಳನ್ನು ನಿಖರವಾಗಿ ಪತ್ತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.ಈ ಬಾರಿ ಯಾವುದೇ ಮಗು ಮತ್ತೊಂದು ಶಾಲೆಗೆ ಸೇರಿದ ನಂತರ ಆ ಶಾಲೆಯಿಂದ ಮಗು ಕಲಿತ ಹಿಂದಿನ ಶಾಲೆಗೆ ಇ-ಮೇಲ್ ಮೂಲಕ ಕೋರಿಕೆ ಪತ್ರ ಸಲ್ಲಿಸಬೇಕು. ಶಾಲೆಯ ಸಂಖ್ಯೆ ನಮೂದಿಸುವುದು ಕಡ್ಡಾಯ. ಆ ನಂತರವೇ ವರ್ಗಾವಣೆ ಪತ್ರ ಇ-ಮೇಲ್ ಮೂಲಕವೇ ಸಂಬಂಧಿಸಿದ ಶಾಲೆಗೆ ಕಳುಹಿಸಲಾಗುತ್ತದೆ. ಇಂತಹ ಪ್ರಕ್ರಿಯೆಗೆ ಒಂದು ವಾರದ ಗಡುವು ನೀಡಲಾಗಿದೆ.