ಬೆಂಗಳೂರು : ಸಾರ್ವಜನಿಕರು, ಶಾಲಾ ಮಕ್ಕಳ ಸುರಕ್ಷತೆಗೆ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, 100 ಕಾಲುಸಂಕಗಳನ್ನು ನಿರ್ಮಿಸಲು ಕ್ರಮ ಕೈಗೊಂಡಿದೆ.
ಕರ್ನಾಟಕ ರಾಜ್ಯದ ಸಂಪರ್ಕ ರಹಿತ ಜನವಸತಿ ಪ್ರದೇಶಗಳಲ್ಲಿ ವಾಸಿಸುವ ನಾಗರೀಕರಿಗೆ ಮಳೆಗಾಲದ ಅವಧಿಯಲ್ಲಿ ರಭಸದಿಂದ ಹರಿಯುವ ಹಳ್ಳ ಮತ್ತು ತೊರೆಗಳನ್ನು ಸುರಕ್ಷಿತವಾಗಿ ದಾಟಲು 485 ಕಾಲುಸಂಕಗಳ ನಿರ್ಮಾಣ ಅವಶ್ಯವಿರುತ್ತದೆ.ಈ ಸಂಪರ್ಕ ರಹಿತ ಪ್ರದೇಶಗಳಲ್ಲಿ ವಾಸಿಸುವ ನಾಗರೀಕರು ಮತ್ತು ಶಾಲಾ ಮಕ್ಕಳು ಮಳೆಗಾಲದಲ್ಲಿ ಹಳ್ಳ ಮತ್ತು ತೊರೆಗಳನ್ನು ದಾಟಲು ಸ್ಥಳೀಯವಾಗಿ ಲಭ್ಯವಿರುವ ಮರದ ತುಂಡುಗಳು, ಹಗ್ಗ ಮುಂತಾದ ಅಸುರಕ್ಷಿತ ನಿರ್ಮಾಣ ಸಾಮಾಗ್ರಿಗಳನ್ನು ಬಳಸಿ ನಿರ್ಮಿಸಿದ ಕಾಲುಸಂಕಗಳನ್ನು ಅವಲಂಬಿಸಿರುತ್ತಾರೆ.ಇದರಿಂದ ಹಲವು ಸ್ಥಳಗಳಲ್ಲಿ ಅವಘಡ ಸಂಭವಿಸಿ ಮಕ್ಕಳ ಜೀವ ಹಾನಿಯಾಗಿರುತ್ತದೆ. ಇವುಗಳನ್ನು ನಿವಾರಿಸಲು ಕಾಲುಸಂಕಗಳ ನಿರ್ಮಾಣವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
ಆದಕಾರಣ ಹಳ್ಳ ಮತ್ತು ತೊರೆಗಳನ್ನು ಸುರಕ್ಷಿತವಾಗಿ ದಾಟಲು ಅನುಕೂಲವಾಗುವಂತೆ ಗರಿಷ್ಠ 3 ಮೀಟರ್ ಅಗಲದ ಕಾಲುಸಂಕಗಳನ್ನು ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಲು ಉದ್ದೇಶಿಸಿ ವಿನ್ಯಾಸ ಹಾಗೂ ನಕ್ಷೆಯನ್ನು ಸರ್ಕಾರ ಸಿದ್ದಪಡಿಸಿದೆ. ಈ ನಿಟ್ಟಿನಲ್ಲಿ ಸರ್ಕಾರವು ಮೊದಲನೆಯದಾಗಿ 100 ಸಂಖ್ಯೆಯ ಕಾಲುಸಂಕಗಳ ನಿರ್ಮಾಣವನ್ನು ಕೈಗೊಳ್ಳಲು ಈಗಾಗಲೇ ಅನುಮೋದನೆ ನೀಡಿರುತ್ತದೆ.ಮುಂದಿನ 2 ವರ್ಷಗಳಲ್ಲಿ ಈ ರೀತಿಯ 385 ಅಸುರಕ್ಷಿತ ಕಾಲುಸಂಕಗಳನ್ನು ಗುರುತಿಸಿ ಸುರಕ್ಷಿತ ಮತ್ತು ಸರ್ವಋತು ಕಾಲುಸಂಕಗಳ ನಿರ್ಮಾಣವನ್ನು ಹಂತ ಹಂತವಾಗಿ ಕೈಗೊಳ್ಳಲಿದೆ.