ಮೇ 10ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆದಿದ್ದು, ಫಲಿತಾಂಶ ಹೊರಬೀಳುತ್ತಿದೆ. ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆ 113 ದಾಟಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರುವುದು ನಿಚ್ಚಳವಾಗಿದ್ದು, ಆಡಳಿತರೂಢ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಜೆಡಿಎಸ್ ಕೂಡ ನಿರೀಕ್ಷಿತ ಸ್ಥಾನಗಳಲ್ಲಿ ಗೆಲುವು ಸಾಧಿಸದೆ ಹಿನ್ನಡೆಗೆ ಒಳಗಾಗಿದೆ.
ಇದರ ಮಧ್ಯೆ ರುದ್ರ ಕರಣ್ ಪ್ರತಾಪ್ ಎಂಬ ಜ್ಯೋತಿಷಿಯೊಬ್ಬರು ಮಾರ್ಚ್ ತಿಂಗಳಿನಲ್ಲಿಯೇ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಕರ್ನಾಟಕದಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎಂಬ ಕುರಿತು ಭವಿಷ್ಯ ನುಡಿದಿದ್ದು ಸತ್ಯಕ್ಕೆ ಸಮೀಪವಾಗಿರುವ ಈ ಭವಿಷ್ಯವಾಣಿ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ.
ಮಾರ್ಚ್ 31, 2023 ರಂದು ಬೆಳಿಗ್ಗೆ 10.39 ರ ಸುಮಾರಿಗೆ ರುದ್ರ ಕರಣ್ ಪ್ರತಾಪ್ ಈ ಪೋಸ್ಟ್ ಹಾಕಿದ್ದು ಇದರಲ್ಲಿ, ಬಿಜೆಪಿಗೆ ಮೇ ತಿಂಗಳು ಅನುಕೂಲಕರವಾಗಿಲ್ಲ. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಅಲ್ಲದೆ ಸರ್ಕಾರ ರಚನೆಯ ಸಾಧ್ಯತೆ ಬಿಜೆಪಿಗಿಂತ ಕಾಂಗ್ರೆಸ್ಸಿಗೆ ಜಾಸ್ತಿ ಇದೆ ಎಂದಿದ್ದರು.
ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ‘ಯೋಗಿನಿ ದಶ’ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಿಂತ ಅಧಿಕವಾಗಿದ್ದು, ಇವರುಗಳ ಜಾತಕದ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಪಡೆದುಕೊಂಡು ಇದನ್ನು ಹೇಳುತ್ತಿದ್ದೇನೆ ಎಂದು ಹೇಳಿದ್ದರು.
ಇದಕ್ಕೆ ಏಪ್ರಿಲ್ 18, 2023 ರಂದು ಪ್ರತಿಕ್ರಿಯಿಸಿದ್ದ ರೋಹನ್ ಮಿಶ್ರಾ ಎಂಬವರು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಹಾಗೂ ಎಷ್ಟು ಸೀಟ್ ಪಡೆಯಬಹುದು ಸಾರ್ ಎಂದು ಪ್ರಶ್ನಿಸಿದ್ದರು. ಇದಕ್ಕೆ ರುದ್ರ ಕರಣ್ ಪ್ರತಾಪ್ ಉತ್ತರಿಸಿ ಕಾಂಗ್ರೆಸ್ ಪಕ್ಷಕ್ಕೆ 123 ರಿಂದ 133 ಸೀಟು ಲಭಿಸಬಹುದು ಎಂದಿದ್ದರು. ಇದೀಗ ಈ ಬಹುಶಃ ಸತ್ಯಕ್ಕೆ ಸಮೀಪವಾಗಿರುವ ಕಾರಣ ವೈರಲ್ ಆಗಿದೆ.