ಬೆಂಗಳೂರು: ಕೆಎಂಎಫ್ ನಂದಿನಿ ಹಾಗೂ ಗುಜರಾತ್ ನ ಅಮುಲ್ ವಿಲೀನಗೊಳಿಸುವ ಬಗ್ಗೆ ಅಮಿತ್ ಶಾ ಪ್ರಸ್ತಾಪಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರಾಜಕೀಯ ನಾಯಕರು ಮಾತ್ರವಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿಯೂ ತೀವ್ರ ವಿರೋಧ ವ್ಯಕ್ತವಾಗಿದೆ.
ಶುಕ್ರವಾರ ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯಲ್ಲಿ ಮೆಗಾ ಡೇರಿ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದ ಅಮಿತ್ ಶಾ ಅಮುಲ್ ಮತ್ತು ನಂದಿನಿ ಒಂದಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಹೇಳಿದ್ದರು. ಈ ಹಿಂದೆಯೂ ಅವರು ಕೆಎಂಎಫ್ ಮತ್ತು ಅಮುಲ್ ವಿಲೀನದ ಬಗ್ಗೆ ಹೇಳಿಕೆ ನೀಡಿದ್ದರು. ಇದು ರಾಜ್ಯದ ರೈತರು ಹಾಗೂ ಸಹಕಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದ್ದು, ರಾಜಕೀಯ ನಾಯಕರಿಂದಲೂ ವಿರೋಧ ವ್ಯಕ್ತವಾಗಿದೆ.
ಸುಮಾರು 20 ಸಾವಿರ ಕೋಟಿ ರೂ. ಗಿಂತಲೂ ಹೆಚ್ಚು ವಹಿವಾಟು ಹೊಂದಿರುವ ಕೆಎಂಎಫ್ ಅನ್ನು ಅಮುಲ್ ನಲ್ಲಿ ವಿಲೀನಗೊಳಿಸುವುದು ಸರಿಯಲ್ಲವೆಂಬ ಅಭಿಪ್ರಾಯ ಕೇಳಿಬಂದಿದೆ. ಈಗಾಗಲೇ ನಮ್ಮ ಬ್ಯಾಂಕುಗಳನ್ನು ಕಸಿದುಕೊಂಡು ಆರ್ಥಿಕತೆ ನಾಶ ಮಾಡಲೆತ್ನಿಸಿದ ಬಿಜೆಪಿಯವರು ಹಾಲಿನ ಮೂಲಕ್ಕೂ ಕೈ ಹಾಕುತ್ತಿದ್ದಾರೆ. ನಮ್ಮ 25 ಲಕ್ಷ ರೈತ ಕುಟುಂಬಗಳನ್ನು ಬೀದಿ ಪಾಲು ಮಾಡುತ್ತಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಗುಜರಾತ್ ಕಾರ್ಪೊರೇಟ್ ಗಳ ಕಣ್ಣು ಬಿದ್ದಿದೆ. ಅವರಿಗಾಗಿಯೇ ದುಡಿಯುತ್ತಿರುವ ಅಮಿತ್ ಶಾ, ಮೋದಿ ಸುಳ್ಳು ಮುಳ್ಳಿನ ಟೋಪಿ ಸಿದ್ದಪಡಿಸಿಕೊಂಡು ಕನ್ನಡಿಗರ ತಲೆಗೆ ತೊಡಿಸಲು ತರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.