ಲೋಕಸಭಾ ಚುನಾವಣೆ ಪೂರ್ಣಗೊಂಡ ಬಳಿಕ ಸಾರ್ವಜನಿಕರಿಗೆ ಬೆಲೆ ಏರಿಕೆಯ ಒಂದೊಂದೇ ಬಿಸಿ ತಟ್ಟುತ್ತಿದೆ. ಮಧ್ಯರಾತ್ರಿಯಿಂದಲೇ ಟೋಲ್ ಶುಲ್ಕದಲ್ಲಿ ಹೆಚ್ಚಳವಾಗಿದ್ದು, ಇದರ ಜೊತೆಗೆ ಈಗ ಮತ್ತೊಂದು ಬೆಲೆ ಏರಿಕೆಯ ಬರೆ ಬಿದ್ದಿದೆ.
ಗುಜರಾತ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್, ತನ್ನ ಪ್ರಸಿದ್ಧ ಬ್ರಾಂಡ್ ಅಮುಲ್ ತಾಜಾ ಹಾಲಿನ ಬೆಲೆಯಲ್ಲಿ ಪ್ರತಿ ಲೀಟರ್ ಗೆ ಎರಡು ರೂಪಾಯಿ ಏರಿಕೆ ಮಾಡಿದ್ದು, ಅದು ದೇಶದಾದ್ಯಂತ ಇಂದಿನಿಂದಲೇ ಜಾರಿಗೆ ಬಂದಿದೆ.
ಅಮುಲ್ ತಾಜಾ ಹಾಲಿನ ಬೆಲೆಯಲ್ಲಿ ರೂ. 2 ಏರಿಕೆಯಾಗಿದ್ದರಿಂದ ಒಟ್ಟಾರೆ ಬೆಲೆಯಲ್ಲಿ ಶೇಕಡ ಮೂರರಿಂದ ನಾಲ್ಕು ರಷ್ಟು ಹೆಚ್ಚಳವಾದಂತಾಗಿದೆ. 2023 ರಿಂದ ಅಮುಲ್ ತನ್ನ ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲಿ ಯಾವುದೇ ಹೆಚ್ಚಳ ಮಾಡಿರಲಿಲ್ಲ.
ಸಾಗಣೆ, ಉತ್ಪಾದನೆ ಮೊದಲಾದವುಗಳ ವೆಚ್ಚ ಏರಿಕೆಯಾಗಿದ್ದರಿಂದ ಹಾಲಿನ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಗುಜರಾತ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ ತಿಳಿಸಿದ್ದು, ಹಾಲು ಉತ್ಪಾದಕರಿಗೂ ಸಹ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.