ಬೆಂಗಳೂರು: ರಾಜ್ಯದ 750 ಗ್ರಾಮಪಂಚಾಯಿತಿಗಳ ಅಭಿವೃದ್ಧಿಗೆ ಅಮೃತ ಗ್ರಾಪಂಗೆ ಯೋಜನೆಗೆ ಇಂದು ಚಾಲನೆ ನೀಡಲಾಗುವುದು.
75 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಮೃತ ಯೋಜನೆ ಘೋಷಣೆ ಮಾಡಿದ್ದರು.ಈ ಯೋಜನೆಯಡಿ ರಾಜ್ಯದ 750 ಗ್ರಾಮಪಂಚಾಯಿತಿಗಳನ್ನು ಅಭಿವೃದ್ಧಿಪಡಿಸಲಾಗುವುದು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ವಿಧಾನಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಮೊದಲಾದವರು ಭಾಗವಹಿಸಲಿದ್ದಾರೆ.
ಈ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗೆ ವಿವಿಧ ಯೋಜನೆಯಡಿ ನೀಡುವ ಅನುದಾನದ ಹೊರತಾಗಿ ಹೆಚ್ಚುವರಿಯಾಗಿ 25 ಲಕ್ಷ ರೂಪಾಯಿ ನೀಡಲಾಗುವುದು. ಈಗಾಗಲೇ ಶೇಕಡ 90 ರಷ್ಟು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಶಾಲೆಗಳು, ಅಂಗನವಾಡಿಗಳಿಗೆ ಆಟದ ಮೈದಾನ, ಕಾಂಪೌಂಡ್, ಕುಡಿಯುವ ನೀರು, ಪ್ರತಿ ಮನೆಗೆ ನಲ್ಲಿ ನೀರಿನ ಸಂಪರ್ಕ, ಶೇಕಡ 100 ರಷ್ಟು ಘನ ತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿ, ಗ್ರಾಪಂ ಕಟ್ಟಡಗಳಿಗೆ ಸೌರವಿದ್ಯುತ್, ಲೈಬ್ರರಿ ಡಿಜಿಟಲೀಕರಣ, ಪಾರ್ಕ್ ನಿರ್ಮಾಣ ಮಾಡುವುದು ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲಾಗುವುದು.